ವಿಶ್ವ ಒಕ್ಕಲಿಗರ ಜನ ಜಾಗೃತಿ ಸಂಘ ಹಾಗೂ ಒಕ್ಕಲಿಗ ಧರ್ಮ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಡಿ.26ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯದ ಗಾಂಧಿ ಭವನದಲ್ಲಿ ಒಕ್ಕಲಿಗರ ಜನ ಸಂಖ್ಯೆಯ ಆಧಾರದ ಮೇಲೆ ಮೀಸಲಾತಿಗಾಗಿ ಆಗ್ರಹಿಸಿ ಪತ್ರ ಚಳುವಳಿ ಹಾಗೂ ಪ್ರಚಾರಾಂದೋಲನ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ರಾಂತಿಸಿಂಹ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರೇ ಶಂಕರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸಿದ್ದರಾಮಚೈತನ್ಯ ಸ್ವಾಮೀಜಿ ವಹಿಸಲಿದ್ದು, ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಸಮಾರಂಭ ಉದ್ಘಾಟನೆ ಮಾಡುವರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಅಧ್ಯಕ್ಷತೆ ವಹಿಸುವರು. ಮುಖಂಡರಾದ ಕೆ.ಎಂ.ರಾಮಕೃಷ್ಣ, ನ.ಲಿ.ಕೃಷ್ಣ, ಎಂ.ಬಿ.ನಾಗಣ್ಣಗೌಡ, ಲಕ್ಷ್ಮಿ, ಮಂಜುಳ ಬೋರೆಗೌಡ ಆಶಯ ನುಡಿಗಳನ್ನು ನುಡಿಯುವರು ಎಂದರು.
ಸಿ.ಎಂ.ಕ್ರಾಂತಿಸಿಂಹ ಪ್ರಾಸ್ತಾವಿಕ ಮಾತನಾಡಲಿದ್ದು, ಕಾರ್ಯಕ್ರಮದಲ್ಲಿ ಎಂ.ಜಿ.ಸಿದ್ದರೂಢ (ಸತೀಶ್ ಗೌಡ) ಶಿವಕುಮಾರ್ (ಶಿವಪ್ಪ), ಸಿ.ಚನ್ನಪ್ಪ, ಹೆಚ್.ಸಿ.ಶಿವಲಿಂಗೇಗೌಡ, ಉಮಾಶಂಕರ್, ನವೀನ್ ಕುಮಾರ್.ಜೆ.ಬಿ ಮತ್ತಿತರರು ಭಾಗವಹಿಸುವರು ಎಂದರು.
ಪ್ರಸ್ತುತ ಒಕ್ಕಲಿಗ ಜನಾಂಗ ಪ್ರವರ್ಗ 3ಎ ನಲ್ಲಿ ಇದೆ. 115ಕ್ಕೂ ಹೆಚ್ಚು ಒಕ್ಕಲಿಗ ಒಳಪಂಗಡಗಳ ಜೊತೆಗೆ ಇನ್ನೂ ಹತ್ತಾರು ಜಾತಿಗಳನ್ನು ಸೇರಿಸಿ ಒಕ್ಕಲಿಗರಿಗೆ ದೊರಯಬೇಕಿದ್ದ ಮೀಸಲಾತಿಯನ್ನು ವಂಚಿಸಲಾಗುತ್ತಿದೆ. ಒಕ್ಕಲಿಗರಿಗೆ ಜನಸಂಖ್ಯಾ ಆಧಾರದ ಮೇಲೆ ಶೇ.18 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಕೆ.ಎಂ.ರಾಮಕೃಷ್ಣ, ದೊರೈರಾಜ್, ಪ್ರಸಾದ್, ಶಂಕರೇಗೌಡ ಮತ್ತಿತರರಿದ್ದರು.




