Wednesday, September 18, 2024

ಪ್ರಾಯೋಗಿಕ ಆವೃತ್ತಿ

ದಳಪತಿ ಸ್ಪರ್ಧೆಗೆ ಮಂಡ್ಯ ಕಮಲ ಪಾಳಯದಲ್ಲೇ ಅಪಸ್ಪರ| ಸ್ವಾಭಿಮಾನಿ ಸುಮಲತಾ ಮತ್ತೇ ಸ್ಪರ್ಧೆ ಮಾಡ್ತಾರಾ ?

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಕಗ್ಗಂಟಾಗಿ ಉಳಿದಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಅಂತೂ ಜೆಡಿಎಸ್‌ ಪಾಲಾಗಿದೆ. ಈಗ ಮಂಡ್ಯದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯುವವರು ಯಾರು ಎಂಬ ಚರ್ಚೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರೇ ಸ್ಪರ್ಧಿಸುತ್ತಾರೆ ಎಂಬುದು ಬಹುತೇಕ ಖಚಿತವಾಗಿದೆ. ಆದರೆ, ಮಂಡ್ಯದಲ್ಲಿ ಉಭಯ ಪಕ್ಷಗಳ ಮೈತ್ರಿಗೆ ವಿರೋಧ, ಆಕ್ಷೇಪಗಳು ಹೆಚ್ಚುತ್ತಿವೆ. ಜೆಡಿಎಸ್‌ ಪರವಾಗಿ ಕೆಲಸ ಮಾಡಲು ಬಿಜೆಪಿಗರು ಭಿನ್ನಮತ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಭೆ ನಡೆಸಿದ್ದು, ಹಲವರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ ತೊರೆದು, ಬಿಜೆಪಿ ಸೇರಿದ್ದ ಮಾಜಿ ಸಚಿವ ಕೆ.ಸಿ ನಾರಾಯಣಗೌಡ ಈಗ ಜೆಡಿಎಸ್‌ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಮಾತನಾಡಿದ್ದಾರೆ.

ಅವರಲ್ಲದೆ, ಮಂಡ್ಯ ಜಿಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿರುವ ಅಶೋಕ್ ಜಯರಾಂ, ಇಂಡವಾಳು ಸಚ್ಚಿದಾನಂದ, ಮುನಿರಾಜು, ಸ್ವಾಮಿ, ಮಂಡ್ಯ ಜಿಲ್ಲಾಧ್ಯಕ್ಷ ಇಂದ್ರೇಶ್ ಕುಮಾರ್, ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ, ಚೇತನ್ ಗೌಡ ಕೂಡ ಜೆಡಿಎಸ್‌ ಜೊತೆ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು, ಹಾಲಿ ಸಂಸದೆ ಸುಮಲತಾ ಸಭೆಗೆ ಗೈರಾಗಿದ್ದು, ಬಿಜೆಪಿ ನಡೆಗೆ ತಮ್ಮ ಆಕ್ಷೇಪವನ್ನು ರವಾನಿಸಿದ್ದಾರೆ.

ಮಂಡ್ಯದಲ್ಲಿ ಬಿಜೆಪಿಯೇ ಸ್ಪರ್ಧಿಸಬೇಕು ಎಂದಿರುವ ನಾರಾಯಣಗೌಡ ಮತ್ತು ಶಿವರಾಮೇಗೌಡ, ಸಂಸದೆ ಸುಮಲತಾಗೆ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ವಿಜಯೇಂದ್ರ ಮನವಿ ಮಾಡಿದ್ದು, ಯೋಚಿಸಿ ನಿರ್ಧಾರ ತಿಳಿಸುವುದಾಗಿ ನಾರಾಯಣಗೌಡ ಹೇಳಿದ್ದಾರೆ ಎಂದು ತಿಳಿದುಬಂದಿದೆ.

“ಮಂಡ್ಯದಲ್ಲಿ ಸುಮಲತಾ ಬಿಜೆಪಿ ಟಿಕೆಟ್ ಕೇಳಿದ್ದರು. ಅವರೇ ಸ್ಪರ್ಧಿಸಬೇಕೆಂದು ನಾವೂ ಬಯಸಿದ್ದೆವು. ಅವರು ಟಿಕೆಟ್ ಕೇಳದಿದ್ದರೆ, ನಾನೇ ಕೇಳುತ್ತಿದ್ದೆ. ಸುಮಲತಾಗೆ ಟಿಕೆಟ್ ಕೊಟ್ಟಿದ್ದರೆ, ಉತ್ಸಾಹದಿಂದ ಕೆಲಸ ಮಾಡುತ್ತಿದ್ದೆವು. ಟಿಕೆಟ್ ಕೈತಪ್ಪಿದ ಬಳಿಕ, ಸುಮಲತಾ ನಮಗೆ ಸಿಕ್ಕಿಲ್ಲ. ಸಂಪರ್ಕಕ್ಕೂ ಸಿಗುತ್ತಿಲ್ಲ. ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲಿಸುವ ಬಗ್ಗೆ ಯೋಚಿಸಿ, ತೀರ್ಮಾನಿಸುತ್ತೇವೆ” ಎಂದು ನಾರಾಯಣಗೌಡ ಹೇಳಿದ್ದಾರೆ.

ಜೆಡಿಎಸ್‌ ತೊರೆದಿದ್ದವರು, ಈಗ ಜೆಡಿಎಸ್‌ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದು ಇರಿಸು-ಮುರಿಸು ತರುವಂತಾಗಿದೆ. ಈ ಹಿಂದೆ, ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಾಗಲೂ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿರಲಿಲ್ಲ. ಇದೀಗ, ಅಂತದ್ದೇ ಪರಿಸ್ಥಿತಿ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಎದುರಾಗಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್ಸಿಗರು ಬೆಂಬಲಿಸದೆ, ಸುಮಲತಾರನ್ನು ಬೆಂಬಲಿಸಿದ್ದರು. ಇದೀಗ, ಕುಮಾರಸ್ವಾಮಿ ಅವರು ಕಣಕ್ಕಿಳಿಯುವ ಸಾಧ್ಯತೆಗಳಿದ್ದು, ಅವರ ವಿರುದ್ಧ ಸಿಡಿದೆದ್ದು, ಆರೋಪಗಳ ಸುರಿಮಳೆಗೈದು ಬಿಜೆಪಿ ಸೇರಿದ್ದ ನಾರಾಯಣಗೌಡ, ಶಿವರಾಮೇಗೌಡ ಈಗ ಅವರ ವಿರುದ್ಧವೇ ಪ್ರಚಾರ ಮಾಡುವುದು ಅಸಾಧ್ಯವೆಂದು ಹೇಳಲಾಗುತ್ತಿದೆ.

ಮತ್ತೊಂದೆಡೆ, ಈ ಹಿಂದೆಯೇ ನನ್ನನ್ನು ಯಾವುದೇ ಒಂದು ಪಕ್ಷಕ್ಕೆ ಹೋಲಿಸಿ ಮಾತನಾಡಬೇಡಿ ಎಂದು ಸುಮಲತಾ ಹೇಳಿದ್ದರು. ಆ ಮೂಲಕ, ಬಿಜೆಪಿ ಟಿಕೆಟ್ ದೊರೆಯದಿದ್ದರೆ, ಪರ್ಯಾಯ ಮಾರ್ಗ ಹುಡುಕುವ ಸೂಚನೆಯನ್ನೂ ನೀಡಿದ್ದರು. ಈಗ ಅವರು ಬಿಜೆಪಿಗರ ಸಂಪರ್ಕಕ್ಕೆ ಸಿಗುತ್ತಿಲ್ಲ. ಬಹುಶಃ ಅವರು ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿವೆ.

ಒಂದು ವೇಳೆ, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ, ಸಚ್ಚಿದಾನಂದ, ನಾರಾಯಣಗೌಡ, ಶಿವರಾಮೇಗೌಡ ಸೇರಿದಂತೆ ಹಲವು ಬಿಜೆಪಿಗರು ಸುಮಲತಾಗೆ ಬೆಂಬಲ ನೀಡುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಹೀಗಾಗಿ, ಬಿಜೆಪಿ ನಾಯಕರು ತಮ್ಮ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಮುಖಂಡರನ್ನು ಮನವೊಲಿಸುವುದು ದುಸ್ಸಾಹಸವಾಗಿದೆ. ಅದರಲ್ಲೂ, ಯಾವುದೇ ಕಾರಣಕ್ಕೂ ಮಂಡ್ಯ ಬಿಡುವುದೇ ಇಲ್ಲ ಎನ್ನುತ್ತಿರುವ ಸುಮಲತಾರನ್ನು ಸ್ಪರ್ಧಿಸದಂತೆ ಸುಮ್ಮನಿರಿಸುವುದು, ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತೊಂದು ಸವಾಲಾಗಿದೆ. ಈ ಎಲ್ಲರ ವಿಶ್ವಾಸ ಗಳಿಸಿ, ಗೆದ್ದು ಬರುವುದು ಜೆಡಿಎಸ್‌ಗೆ ಪ್ರತಿಷ್ಠೆಯ ವಿಚಾರವಾಗಿದೆ. ಇದೆಲ್ಲವೂ ಮೈತ್ರಿಗೆ ಸಾಧ್ಯವಾಗುವುದೇ ಅಥವಾ ಈ ಕಗ್ಗಂಟು ಕಾಂಗ್ರೆಸ್‌ಗೆ ಲಾಭ ಮಾಡಿಕೊಡುವುದೇ? ಎಲ್ಲದಕ್ಕೂ ಚುನಾವಣಾ ಕಣ ಉತ್ತರಿಸಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!