Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಗುತ್ತಿಗೆ ನೌಕರರ ಸಮಸ್ಯೆ ನಿವಾರಣೆಗೆ ಕಾರ್ಮಿಕ ವಿವಿದೊದ್ದೇಶ ಸೊಸೈಟಿ : ಡಾ.ಕುಮಾರ

ಮಂಡ್ಯ ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ಸೇವೆ ಪಡೆದು ಅವರಿಗೆ ಯಾವುದೇ ತೊಂದರೆ ಇಲ್ಲದೆ ವೇತನ ಹಾಗೂ ಇನ್ನಿತರೆ ಸೌಲಭ್ಯ ಒದಗಿಸಲು ಕಾರ್ಮಿಕ ವಿವಿದ್ದೋದೇಶ ಸೊಸೈಟಿ ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಹೊರಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ ಪ್ರತಿ ಮಾಹೆ 5 ನೇ ತಾರೀಖಿನೊಳಗೆ ವೇತನ ಪಾವತಿಯಾಗುತ್ತಿಲ್ಲ, ಪಿ.ಎಫ್ ನೀಡುತ್ತಿಲ್ಲ ಎಂದು ಹಲವಾರು ದೂರುಗಳು ಬರುತ್ತಲೆ ಇರುತ್ತದೆ. ಕಾರ್ಮಿಕ ವಿವಿದ್ದೋದೇಶ ಸೊಸೈಟಿ ಸ್ಥಾಪಿಸಿ ಸೊಸೈಟಿ ಮೂಲಕ ಹೊರಗುತ್ತಿಗೆ ನೌಕರರನ್ನು ಪಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸೊಸೈಟಿ ಪ್ರಾರಂಭಿಸಲು ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಹೊರಗುತ್ತಿಗೆ ಮೂಲಕ ಪಡೆಯುವ ನೌಕರರ ವರ್ಗವಾರು ಸಂಖ್ಯೆಯನ್ನು ಕಾರ್ಮಿಕ ಇಲಾಖೆ ಅವರು ಪಟ್ಟಿಮಾಡಿಕೊಳ್ಳಿ, ಅಧಿಕಾರಿಗಳು ಆದ್ಯತೆಯ ಮೇಲೆ ಕಾರ್ಮಿಕ ಇಲಾಖೆಗೆ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿ ಒದಗಿಸಿ ಎಂದರು.

ಸೊಸೈಟಿ ಪ್ರಾರಂಭಿಸಲು ಕನಿಷ್ಠ 1000 ಸದಸ್ಯರ ನೊಂದಣಿಯಾಗಬೇಕು. ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲೇ 1000 ಜನರು ದೊರಕುತ್ತಾರೆ. ಈ ಹಿನ್ನಲೆಯಲ್ಲಿ ಬೈಲಾ ಸಿದ್ಧಪಡಿಸಿ ನೊಂದಣಿ ಇಲಾಖೆಯಲ್ಲಿ ಸೊಸೈಟಿ ನೊಂದಣಿ ಕೆಲಸವನ್ನು ಪ್ರಾರಂಭಿಸಿ ಎಂದರು.

ನೊಂದಣಿಯಾದ ನಂತರ ಸರ್ಕಾರಕ್ಕೆ ಸೊಸೈಟಿ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವ ಕೆಲಸ ನಡೆಸಬೇಕಿದೆ. ಸೊಸೈಟಿ ಸ್ಥಾಪನೆಯಿಂದ ಹೊರಗುತ್ತಿಗೆ ನೌಕರರಿಗೆ ಆರೋಗ್ಯ ವಿಮೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಬಹುದು ಎಂದರು.

ಹೊರಗುತ್ತಿಗೆ ನೌಕರರಿಗೆ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಕೆಲವು ಮದ್ಯವರ್ತಿಗಳು ಸಂಘಗಳನ್ನು ಸ್ಥಾಪಿಸಿ ಹಣ ವಸೂಲಾತಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಹೊರಗುತ್ತಿಗೆ ನೌಕರರು ಹಣ ನೀಡಿ ಮೋಸ ಹೋಗದಂತೆ ಎಚ್ಚರಿಕೆ ನೀಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಸವಿತಾ ಮಾತನಾಡಿ, ಬೈಲಾದಲ್ಲಿ ಅಧ್ಯಕ್ಷರು, ಸಹ ಅಧ್ಯಕ್ಷರು ಹಾಗೂ ಸದಸ್ಯರು ಇರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣ ಗೌಡ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದಿನೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಮಧುಶ್ರೀ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ