ಕ್ರೀಡಾಕೂಟಗಳೆಂದರೆ ಕೇವಲ ಸೋಲು, ಗೆಲುವಿನ ಲೆಕ್ಕಾಚಾರವಲ್ಲ. ತಂಡಗಳ ನಡುವಿನ ಸೆಣಸಾಟವೂ ಅಲ್ಲ. ಹಳ್ಳಿ ಹಳ್ಳಿಗಳನ್ನು ಬೆಸೆಯುವ, ಪರಸ್ಪರ ಮನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ವೇದಿಕೆಗಳು. ಕ್ರೀಡೆಗೆ ಮಾತ್ರ ಜಾತಿ, ಧರ್ಮಗಳನ್ನು ಮೀರಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದೆ ಎಂದು ವಿಚಾರವಾದಿ ವಿನಯ್ ಕುಮಾರ್ ಹೇಳಿದರು.
ಎಲ್ಲರೊಳಗಿಂದಾಗು ಮಂಕುತಿಮ್ಮ ಟ್ರಸ್ಟ್ ಮತ್ತು ಕೆರಗೋಡು ಫ್ರೆಂಡ್ಸ್ ಕ್ಲಬ್ ಶನಿವಾರ ಸಂಯುಕ್ತವಾಗಿ ಆಯೋಜಿಸಿದ್ದ ಎರಡು ದಿನಗಳ ಹೊನಲು ಬೆಳಕಿನ ‘ಕೆರಗೋಡು ವಾಲಿಬಾಲ್ ಪ್ರೀಮಿಯರ್ ಲೀಗ್ 2025’ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ವಿನಯ್ ಕುಮಾರ್ ‘ಈ ಬಾರಿಯ ಲೀಗ್ ಆರು ಹಳ್ಳಿಗಳ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಕಾರಣವಾಗಿದ್ದು, ಮುಂದಿನ ಸೀಸನ್ನಲ್ಲಿ 12 ತಂಡಗಳನ್ನು ಒಳಗೊಂಡು, ಇನ್ನಷ್ಟು ವಿಸ್ತಾರಗೊಳ್ಳಲಿ’ ಎಂದು ಶುಭ ಕೋರಿದರು.

ಇಂದು ಜಗತ್ತಿನಲ್ಲೇ ಚೀನಾ, ಅಮೆರಿಕಾ ದೇಶಗಳು ಒಲಿಂಪಿಕ್ಸ್ನಲ್ಲಿ ಅತಿಹೆಚ್ಚು ಪದಕಗಳನ್ನು ಪಡೆಯುವ ದೇಶಗಳಾಗಿವೆ. ಅಲ್ಲಿ ಕ್ರೀಡಾಪಟುಗಳಿಗೆ ಮೊದಲ ಆದ್ಯತೆ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ದೇಶದಲ್ಲೂ ಅದ್ಭುತ ಸಾಮರ್ಥ್ಯದ ಆಟಗಾರರಿದ್ದಾರೆ ಎಂಬುದು ಕೆರಗೋಡು ಸುತ್ತಮುತ್ತಲ ವಾಲಿಬಾಲ್ ಪಟುಗಳನ್ನು ನೋಡಿದಾಗ ತಿಳಿಯಿತು. ಹಳ್ಳಿ ಹೈಕಳಿಗೆ ಸರಿಯಾದ ತರಬೇತಿ, ಮಾರ್ಗದರ್ಶನ ಮತ್ತು ಸಹಕಾರ ದೊರೆತರೆ ದೇಶಕ್ಕೆ ಕೀರ್ತಿ ತರಬಲ್ಲರು. ಈ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಪಟುಗಳ ಜತೆ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ನಿಲ್ಲಲಿದೆ ಎಂದು ವಿನಯ್ ಅವರು ಹೇಳಿದರು.
ಬೆಟ್ಡಿಂಗ್ನಿಂದ ದೂರವಿರಿ: ಕೆಂಪರಾಜು
ಈಗ ಐಪಿಎಲ್ ನಡೆಯುತ್ತಿದೆ. ಮಂಡ್ಯದಲ್ಲಿ ಯುವಜನರು ಒಟ್ಟಾಗಿ ಸೇರುವ ಯಾವುದೇ ಟೀ ಅಂಗಡಿ, ಡಾಬಾ, ಹೋಟೆಲ್, ರೆಸ್ಟೋರೆಂಟ್ ಎಲ್ಲಿಗೇ ಹೋದರೂ ಆನ್ಲೈನ್ ಬೆಟ್ಟಿಂಗ್ನ ಸದ್ದು ಜೋರಾಗಿ ಕೇಳಿಸುತ್ತಿದೆ. ಓದಿ, ವಿದ್ಯಾವಂತರಾಗಿ, ಮನೆಗೆ ಆಸರೆಯಾಗಬೇಕಾದ ಯುವಜನತೆ ಬೆಟ್ಟಿಂಗ್ ಬಲೆಗೆ ಬಿದ್ದು ಸಾಲಗಾರರಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಾಯಕಾರಿ ಜೂಜಿನಿಂದ ಯುವಕರು ದೂರವಿರಬೇಕು.
~ಜಿ.ಎನ್. ಕೆಂಪರಾಜು, ಚಿಂತಕರು
ರೋಚಕ ಸೆಣಸಾಟ; ಮಳೆಯ ಕಾಟ
ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಪಂದ್ಯವಾಡಿದ ಹಲ್ಲೆಗೆರೆ ಬಾಯ್ಸ್ vs ಬಾಣಸವಾಡಿ ಚಾಲೆಂಜರ್ಸ್ ತಂಡಗಳು ನಡೆಸಿದ ತೀವ್ರ ಪೈಪೋಟಿ ಪ್ರೇಕ್ಷಕರನ್ನು ರಂಜಿಸಿತು. ಕೆರಗೋಡಿನ ತಂಡಗಳಾದ ಮಜಾ ಬಾಯ್ಸ್ vs ಸೂರ್ಯ್ ಸ್ಟ್ರೈಕರ್ಸ್ ತಂಡಗಳು ಪ್ರಬಲ ಪೈಪೋಟಿ ಮತ್ತು ಪರಿಣಾಮಕಾರಿ ಹೊಡೆತಗಳಿಂದ ಕೇವಲ ಒಂದು ಪಾಯಿಂಟ್ ಅಂತರವನ್ನು ಕಡೆಯವರೆಗೂ ಕಾಯ್ದುಕೊಂಡು ಪಂದ್ಯಾವಳಿಯನ್ನು ಕೊನೆಯವರೆಗೂ ರೋಚಕ ಘಟ್ಟವನ್ನು ಮುಟ್ಟಿಸಿದವು.
ಇಂದು ಫೈನಲ್: ಕಪ್ ಯಾರಿಗೆ?
ಒಬ್ಬರಿಗಿಂತ ಒಬ್ಬರು, ಒಂದಕ್ಕಿಂತ ಒಂದು ತಂಡ ಪ್ರಬಲ ಪೈಪೋಟಿ ಒಡ್ಡಿ, ಪಂದ್ಯಾವಳಿ ಲೀಗ್ ಹಂತದಲ್ಲಿ ಹೆಚ್ಚು ಪಾಯಿಂಟ್ ಗಿಟ್ಟಿಸಿರುವ ನಾಲ್ಕು ತಂಡಗಳು ಕ್ವಾಲಿಫೈಯರ್ ಮತ್ತು ಸೆಮಿ ಫೈನಲ್ನಲ್ಲಿ ಇಂದು ಸೆಣಸಾಡಲಿವೆ. ನಂತರ ಸಂಜೆ ನಾಲ್ಕು ಗಂಟೆ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿಯ ಕಪ್ ಯಾವ ತಂಡದ ಕೈ ಸೇರಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ.
5 ಗಂಟೆ ಸಮಾರೋಪ
ಫೈನಲ್ ಪಂದ್ಯದ ನಂತರ 5 ಗಂಟೆಗೆ ಕೆವಿಪಿಎಲ್ನ ಸಮಾರೋಪ ಸಮಾರಂಭ ನಡೆಯಲಿದ್ದು, ವಿಜೇತ ತಂಡಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ ಅವರು ಟ್ರೋಫಿ ಹಸ್ತಾಂತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ರವಿಕುಮಾರ್ ಗೌಡ ಮತ್ತು ದರ್ಶನ್ ಪುಟ್ಟಣ್ಣಯ್ಯನವರು ಆಗಮಿಸಲಿದ್ದಾರೆ.




