Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯವನ್ನು ನನ್ನ ಹೃದಯ ಅಂತಾರೆ, ಆದರೆ ಏನು ಮಾಡಿದ್ದಾರೆ : ದಳಪತಿಗಳಿಗೆ ಚೆಲುವರಾಯಸ್ವಾಮಿ ಟಾಂಗ್

ಮಂಡ್ಯವನ್ನು ಇಬ್ಬರೂ ನಾಯಕರು ಹೇಳುತ್ತಾರೆ ನನ್ನ ಹೃದಯ ಅಂತ, ಆದರೆ ಮಂಡ್ಯಕ್ಕೆ ಏನು ಮಾಡಿದ್ದಾರೆ ?
ಮಾಜಿ ಮುಖ್ಯಮಂತ್ರಿಗಳು ಮಾಜಿ ಪ್ರಧಾನಮಂತ್ರಿಗಳ ಮಕ್ಕಳು ಮಾತನಾಡಬೇಕಾದರೆ ತೂಕವಿರಬೇಕು ಎಂದು ಕಾಂಗ್ರೆಸ್ ನಾಯಕ ಎನ್.ಚೆಲುವರಾಯಸ್ವಾಮಿ ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಮಂಡ್ಯ ಜಿಲ್ಲೆ, ಆದರೆ, ಮಂಡ್ಯ ಜಿಲ್ಲೆಯನ್ನು ಯಾವತ್ತೂ ಕೂಡ ಅವರು ಕನ್ಸಿಡರ್ ಮಾಡೇ ಇಲ್ಲ. ಹಾಸನದಲ್ಲಿ ಏಳು ಸೀಟು ಗೆಲ್ಲಲಿಲ್ಲ. ರಾಮನಗರದಲ್ಲಿ ನಾಲ್ಕು ಸೀಟು ಗೆಲ್ಲಿಸಲಿಲ್ಲ. ಹಾಸನದಲ್ಲಿ ಅಪ್ಪ, ಅಣ್ಣ ಪೂರ್ಣ ಪ್ರಮಾಣದಲ್ಲಿ ಪ್ರತಿನಿಧಿಸುತ್ತಾರೆ. ರಾಮನಗರವನ್ನು ನಂದು ಎಂದು ಒಬ್ಬರು ಹೇಳುತ್ತಾರೆ. ಆದರೆ ಮಂಡ್ಯದಲ್ಲಿ ಏಳಕ್ಕೆ ಏಳು ಸ್ಥಾನವನ್ನು ಗೆದ್ದರೂ ಏನು ಸಾಧನೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದರು.

ಡಿಸಿಸಿ ಬ್ಯಾಂಕ್ ನಾವು ಗೆದ್ವಿ, ಅದನ್ನು ಅವರಿಗೆ ಬೇಕಾದ ರೀತಿ ಬಳಸಿಕೊಂಡರು. ಕೆ ಆರ್ ಪೇಟೆಯಲ್ಲಿ ಗಣಿ ಸಚಿವರು ಗಣಿಯನ್ನು ನಿಲ್ಲಿಸಿದ್ದರು, ಅದನ್ನು ಅವರಿಗೆ ಬೇಕಾದ ರೀತಿ ಬಳಸಿಕೊಂಡ್ರು. ಅವರಿಗೆ ಬೇಕಾದ ರೀತಿ ಸರ್ಕಾರವನ್ನು ಬಳಸಿಕೊಳ್ಳುತ್ತಾರೆ, ಆದರೆ ಜನ ಪರವಾಗಿ ಕೆಲಸ ಮಾಡಲು ಸರ್ಕಾರ, ಅವರ ಮಾತನ್ನು ಕೇಳುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ಮಂಡ್ಯದಲ್ಲಿ ಜನತಾದಳ ಪ್ರಬಲವಾಗಿದೆ ಇಲ್ಲ, ಅಂತ ನಾವೇನು ಹೇಳೋದಿಕ್ಕೆ ಆಗೋಲ್ಲ. ಜನತಾದಳದಲ್ಲಿ ಏಳು ಕ್ಷೇತ್ರದಲ್ಲಿ ಅವರದೇ ಆದ ಶಕ್ತಿ ಇದೆ, ಯಾರು ಕಟ್ಟಿದ್ರು ಹೇಗೆ ಕಟ್ಟಿದ್ರು ಯಾವ ರೀತಿ ಬೆಳಿತು, ಈ ಸಂದರ್ಭದಲ್ಲಿ ಮಾತಾಡುವುದು ಅಪ್ರಸುತ್ತ. ಚುನಾವಣೆ ಫಲಿತಾಂಶವನ್ನು ಜನರು ತೀರ್ಮಾನ ಮಾಡುತ್ತಾರೆ. ಏಳು ಗೆದ್ದು ಮಂಡ್ಯ ಜಿಲ್ಲೆಯಲ್ಲಿ ಏನೆಲ್ಲಾ ಸಾಧನೆಯಾಗಿದೆ, ಏನೆಲ್ಲಾ ಅಭಿವೃದ್ಧಿಯಾಗಿದೆ, ಏನೆಲ್ಲಾ ಕಾರ್ಯಕ್ರಮಗಳು ಕೊಟ್ಟಿದೆ ಎಂದು ಪ್ರಶ್ನಿಸಿದರು.

ಮಹಿಳೆಯರಿಗೆ, ರೈತರಿಗೆ, ಯುವಕರಿಗೆ, ಕಾರ್ಮಿಕರಿಗೆ ನೀಡಿದ ಭರವಸೆ ಈಡೇರಿಸಿದ್ದಾರಾ ? ಇವೆಲ್ಲ ತಾನೇ ಚುನಾವಣೆ ಅಕೌಂಟ್ ಎಬಿಲಿಟಿ. ಚುನಾವಣೆ ಟೈಮಲ್ಲೇ ಜನತಾದಳದ ನಾಯಕರನ್ನ, ಶಾಸಕರನ್ನ, ಜಿಲ್ಲಾ ನಾಯಕರನ್ನ ಏಳು ಸೀಟನ್ನು ಕೊಟ್ಟಿದ್ವಿ ಏನು ಮಾಡಿದ್ದೀರಿ ಎಂದು ಜನ ಪ್ರಶ್ನೆ ಮಾಡುತ್ತಾರೆ. ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಅವರ ಮುಂದೆ ಇದೆ, ಇವೆಲ್ಲವನ್ನೂ ಕೂಡ ಜನರೇ ತೀರ್ಮಾನ ಮಾಡಿರೋದು, ಪ್ರಬುದ್ಧ ಮತದಾರರೇ ತೀರ್ಮಾನ ಕೊಟ್ಟಿದ್ದಾರೆ ಎಂದರು.

ಕುಮಾರಸ್ವಾಮಿ ದಲಿತರಿಗೆ ಡಿಸಿಎಂ ಹುದ್ದೆ ನೀಡುತ್ತೇನೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಸಿದ ಅವರು, ಅವರು ಹೇಳಿರುವುದಲ್ಲಿ ಬಹಳ ಇಂಪಾರ್ಟೆಂಟ್ ಪಾಯಿಂಟ್ ಇದೆ. ನಾನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ದಲಿತರಿಗೆ ಮುಸ್ಲಿಂ ಗೆ ಕೊಡುತ್ತೇನೆ ಎಂದು ಹೇಳುತ್ತಾರೆ, ಸಾಲ ಮನ್ನಾ, ಮಹಿಳೆಯರ ಸಾಲ ಮನ್ನಾ ಮಾಡ್ತೀನಿ ಅಂತ ಹೇಳುತ್ತಾರೆ, ಪೂರ್ಣ ಪ್ರಮಾಣದಲ್ಲಿ ಅಂದರೆ 120 ಸೀಟು ತಗೋಬೇಕು, ಅನಂತರ ನನಗೆ ಪೂರ್ಣಪ್ರಮಾಣದಲ್ಲಿ ಬಹುಮತ ಬರಲಿಲ್ಲ, ಹಾಗಾಗಿ ಯಾವುದನ್ನು ಮಾಡೋದಕ್ಕೆ ಆಗಲಿಲ್ಲ ಎಂದು  ಹೇಳುತ್ತಾರೆ ಎಂದರು.

ಕಳೆದ ಬಾರಿ ಕೂಡ ಮಹಿಳೆಯರ ಸ್ವಸಹಾಯ ಸಂಘದ ಸಂಪೂರ್ಣ ಸಾಲ ಮನ್ನಾ, ವೈಯಕ್ತಿಕವಾಗಿ ಗಿರವಿ ಇಟ್ಟ ಒಡವೆಗಳ ಸಾಲವನ್ನು ನಾನು ಅಧಿಕಾರಕ್ಕೆ ಬಂದರೆ ಮನ್ನಾ ಮಾಡುತ್ತೇನೆ ಎಂದ್ರು, ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಕಳೆದ ಬಾರಿ 120 ಸೀಟ್ ಬಂತೋ..? ಬರಲಿಲ್ವೋ…? ಮುಖ್ಯಮಂತ್ರಿ ಅಂತೂ ಆದ್ರೂ. 120 ಸೀಟ್ ಗೆದ್ರುನು ಮುಖ್ಯಮಂತ್ರಿನೇ, 37 ಸೀಟ್ ಗೆದ್ರುನೂ ಮುಖ್ಯಮಂತ್ರಿನೇ ಆಗಿದ್ದು ಅವರ ಸಾಧನೆ ಎಂದರು.

ಮಂಡ್ಯಕ್ಕೆ 8,000 ಕೋಟಿ ಕೊಟ್ಟಿದ್ದೇನೆ ಎಂದು ಇವತ್ತಿಗೂ ಹೇಳುತ್ತಾರೆ, ಏನಾದರೂ ಉಪಯೋಗ ಆಗಿದ್ಯಾ ? ಒಂದು ರಸ್ತೆ ಗುಂಡಿ ಮುಚ್ಚಿದ್ದೀಯಾ ? ಏಳು ಜನ ಶಾಸಕರು ಇದ್ದಾರೆ, ಮಂಡ್ಯ ಸಿಟಿ ಆಗಬಹುದು ಅಥವಾ ಗ್ರಾಮೀಣ ಭಾಗದಲ್ಲಾಗಿರಬಹುದು. ರಸ್ತೆ ಸರಿಪಡಿಸೋಕೆ ಆಗಿದೆಯಾ ? ಅಥವಾ ಮಹಿಳೆಯರು ಚಿನ್ನ ಇಟ್ಟಿದ್ದು ಅಥವಾ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡಿದ್ದಾರಾ ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಬಿಟ್ಟು ಇನ್ಯಾವುದೇ ಪಕ್ಷ ಪೂರ್ಣಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ

ಸ್ವತಂತ್ರ ಬಂದಮೇಲೆ ಕಾಂಗ್ರೆಸ್ ಬಿಟ್ಟು ಇನ್ಯಾವುದೇ ಪಕ್ಷ ಪೂರ್ಣಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ.
ಬಿಜೆಪಿಯವರು ಎರಡು ಮೂರು ಬಾರಿ ಅಧಿಕಾರಕ್ಕೆ ಬಂದರೂ ಕೂಡ, ಆಪರೇಷನ್ ಕಮಲದ ಮೂಲಕ ಬಂದವರು, ನೇರವಾಗಿ ಬಹುಮತದಿಂದ ಆಗಿಲ್ಲ, ಜನತಾದಳ ಹೆಗಡೆಯವರು ಹಾಗೂ ದೇವೇಗೌಡರು ಮುಖ್ಯಮಂತ್ರಿ ಆದಾಗ ಮಾತ್ರ ಅಧಿಕಾರಕ್ಕೆ ಬಂದಿದ್ದು ಎಂದರು.

ಒಂದೂವರೆ ವರ್ಷ ಅಧಿಕಾರ ಇದ್ದಾಗ, ಕಾಂಗ್ರೆಸ್ ನವರು ಅಧಿಕಾರ ತೆಗೆದ್ರು, ನಾನು ಸಮ್ಮಿಶ್ರ ಸರ್ಕಾರದಲ್ಲಿದ್ದೆ ಹೆಚ್ಚು ಕೆಲಸ ಮಾಡಲಿಕ್ಕೆ ಆಗಲಿಲ್ಲ ಅಂತ ಹೇಳುವುದು ಬಿಟ್ಟರೆ, ಹಣಕಾಸಿನ ಸಚಿವರು ಅವರೇ ಇದ್ದರು, ಒಬ್ಬ ಮುಖ್ಯಮಂತ್ರಿಗೆ ಯಾರ್ ಸಪೋರ್ಟ್ ಮಾಡ್ತಾರೋ ? ಇಲ್ವೋ..? ಸ್ವತಃ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಅವರಿಗಿರುತ್ತೆ ಅಲ್ವಾ? ಎಂದು ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಗೆ ಒಳ್ಳೆಯ ಫಲಿತಾಂಶ ಬರಲಿದೆ

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರು ಅರ್ಜಿ ಹಾಕುವುದು ನಮ್ಮ ಪಕ್ಷದ ಸಿದ್ಧಾಂತ. ಮಂಡ್ಯ ಕಾಂಗ್ರೆಸ್ಸಿನ ಭದ್ರಕೋಟೆ. ಮಧ್ಯ ಸ್ವಲ್ಪ ವ್ಯತ್ಯಾಸ ಆಗಿದೆ, ಮತ್ತೆ ಮಂಡ್ಯದಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ಫಲಿತಾಂಶ ಬರಲಿದೆ.
ಮಂಡ್ಯದಲ್ಲಿ ಅತಿ ಹೆಚ್ಚು ಆಕಾಂಕ್ಷಿತರು ಇದ್ದಾರೆ ಎಂದರೆ, ಸಂತೋಷ ಪಡಬೇಕು, ಬೇಸರ ಯಾಕೆ ಮಾಡಿಕೊಳ್ಳಬೇಕು. ಎಲ್ಲರೂ ಪಕ್ಷಕ್ಕೆ ಬದ್ಧರಾಗಿದ್ದಾರೆ, ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಅರ್ಜಿ ಹಾಕಿರುವ 16 ಜನ ಆಕಾಂಕ್ಷಿತರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಎಷ್ಟು ಜನ ಆಕಾಂಕ್ಷಿತರು ಇದ್ದರೂ ಒಗ್ಗಟ್ಟಿನಿಂದ ಚುನಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜು, ಕಾಂಗ್ರೆಸ್ ನಗರಾಧ್ಯಕ್ಷ ರುದ್ರಪ್ಪ, ನಗರಸಭಾ ಸದಸ್ಯರಾದ ಶ್ರೀಧರ್, ನಯೀಂ, ನಗರಸಭಾ ಮಾಜಿ ಸದಸ್ಯ ಅನಿಲ್ ಕುಮಾರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!