ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯೋಜಿಸಿದ್ದ ಚುನಾವಣೆಯನ್ನುಕೋರಂ ಅಭಾವದಿಂದ ಅನಿವಾರ್ಯವಾಗಿ ಮುಂದೂಡಲಾಗಿದೆ.
ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆಯೋಜಿಸಿದ್ದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಪ್ರತಿಮಾ, ಬಿ.ಟಿ.ಶಂಕರ್ ನಾಮಪತ್ರ ಸಲ್ಲಿಸಿ ಚುನಾವಣೆಗೆ ಗೈರಾದರು.
10 ನಿರ್ದೇಶಕ ಬಲದ ಆಡಳಿತ ಮಂಡಳಿಯಲ್ಲಿ ಇಬ್ಬರು ನಿರ್ದೇಶಕರಷ್ಟೇ ಹಾಜರಾಗಿದ್ದರು. ಚುನಾವಣಾಧಿಕಾರಿ ಯಾದ ಸಹಕಾರ ಅಭಿವೃದ್ಧಿ ಅಧಿಕಾರಿ ರವಿ ಅವರು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯನ್ನು ಏ.29 ಕ್ಕೆ ಮುಂದೂಡಿ ನಿರ್ಧಾರ ಪ್ರಕಟಿಸಿದರು. ಈ ವೇಳೆ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಡಿ.ಸುರೇಶ್ ಹಾಜರಿದ್ದರು.
ಕಳೆದ 15 ವರ್ಷಗಳ ಬಳಿಕ ಸಂಘದಲ್ಲಿ ಚುನಾವಣೆ ಜಿದ್ದಾಜಿದ್ದಿ ನಡೆದು ಕಾಂಗ್ರೆಸ್, ರೈತಸಂಘ ಬೆಂಬಲಿತ ಇಬ್ಬರು, ಬಿಜೆಪಿ ಜೆಡಿಎಸ್ ಬೆಂಬಲಿತ 8 ನಿರ್ದೇಶಕರು ಆಯ್ಕೆಯಾಗಿದ್ದರು. ಇಂದು ನಡೆಯಬೇಕಿದ್ದ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ ಉಂಟಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿರುವುದು ಸಂಘದ ಷೇರುದಾರರ ಅಸಮಾಧಾನಕ್ಕೆ ಕಾರಣವಾಗಿದೆ.




