Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿಶ್ವವಿದ್ಯಾಲಯ ಉನ್ನತೀಕರಣಕ್ಕೆ ಕ್ರಮ: ಎನ್. ಚಲುವರಾಯಸ್ವಾಮಿ

ಮಂಡ್ಯ ವಿಶ್ವವಿದ್ಯಾಲಯವು ಪ್ರಥಮ ದರ್ಜೆ ಕಾಲೇಜಿನ ರೂಪದಲ್ಲಿದ್ದು, ಇದನ್ನು ಉನ್ನತೀಕರಣ ಮಾಡಲು ಕ್ರಮವಹಿಸುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯದ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯದ ರೀತಿ ಮಂಡ್ಯ ವಿಶ್ವವಿದ್ಯಾಲಯ ‌ಬೆಳೆಯಬೇಕು. ಇಲ್ಲಿಗೆ ಬೇಕಿರುವ ವ್ಯವಸ್ಥೆಗಳ ಬಗ್ಗೆ ಕುಲಪತಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಮಂಡ್ಯ ವಿಶ್ವವಿದ್ಯಾಲಯವನ್ನು 5 ವರ್ಷದ ಅವಧಿಯಲ್ಲಿ ಪರಿಪೂರ್ಣ ವಿಶ್ವವಿದ್ಯಾಲಯನ್ನಾಗಿ ಮಾಡುತ್ತೇವೆ.
2019 ರಲ್ಲಿ ಮಂಡ್ಯ ವಿಶ್ವವಿದ್ಯಾಲಯವಾಗಿ ಘೋಷಣೆಯಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿಲ್ಲ. ಒಂದು ವಿಶ್ವವಿದ್ಯಾಲಯದಲ್ಲಿರಬೇಕಾದ ವಾತಾವರಣ ನಿರ್ಮಾಣವಾಗಿಲ್ಲ. ವಿಶ್ವವಿದ್ಯಾಲಯವಾಗಿ 4 ವರ್ಷಗಳಾದರೂ, ಮೈಸೂರು-ಬೆಂಗಳೂರಿನಲ್ಲಿರುವಂತೆ ವಿಶ್ವವಿದ್ಯಾಲಯದ ಭಾವನೆ ಬರಲು ಸಾಧ್ಯವಾಗಿಲ್ಲ ಎಂದರು.

ಮಂಡ್ಯ ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿ ಏನೇನು ಬೇಕು ಎಂಬುದರ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಎಂದು ಕುಲ ಸಚಿವರಿಗೆ ತಿಳಿಸಿದ್ದೇನೆ. ಅವರು ಸಲ್ಲಿಸಿದ ಬೇಡಿಕೆಗಳಿಗನುಗುಣವಾಗಿ ಸರ್ಕಾರದ ಗಮನಕ್ಕೆ ತಂದು ಮಂಡ್ಯ ವಿಶ್ವವಿದ್ಯಾಲಯ ಒಂದು ಪರಿಪೂರ್ಣ ವಿಶ್ವವಿದ್ಯಾಲಯವಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಹೊಸ ಹೊಸ ಕೋಸ್೯ಗಳು ಪ್ರಾರಂಭವಾಗಿರುವುದು ಆಶಾದಾಯಕ ಬೆಳವಣಿಗೆ. ಹೊಸ ಕೋರ್ಸ್‌ಗಳ ಅಗತ್ಯವಿದ್ದರೆ ಸರ್ಕಾರದಿಂದ ಅನುಮತಿ ಕೊಡಿಸಿಕೊಡಲಾಗುವುದು ಎಂದರು.

ಸಂಸದೆ ಸುಮಲತಾ ಅಂಬರೀಷ್ ಅವರು‌ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಕ್ರಮದ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಎಂಬುದು ಅತ್ಯಮೂಲ್ಯವಾದುದು. ಜವಾಬ್ದಾರಿ ಅರಿತು ತಮ್ಮ ಸಾಧನೆ ಗುರಿಯತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ರವಿಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನ ಎಂಬುದು ಗೋಲ್ಡನ್ ಲೈಫ್, ಈ ಸಮಯ ಮತ್ತೊಮ್ಮೆ ನಿಮಗೆ ಬರುವುದಿಲ್ಲ. ಹಾಗಾಗಿ ಉನ್ನತ ವ್ಯಾಸಂಗ ಮಾಡಿ ಸಮಾಜಕ್ಕೆ ಉತ್ತಮ ಹೆಸರು ತರಬೇಕು ಎಂದರು.

ವಿದ್ಯಾರ್ಥಿ ಜೀವನ ಎಂಬುದು ಮತ್ತೊಮ್ಮೆ ಬರುವುದಿಲ್ಲ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಇದಕ್ಕೂ ಮೊದಲು ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಗಣಿಗ ರವಿಕುಮಾರ್ ಅವರನ್ನು ಕಲಾತಂಡಗಳು ವೇದಿಕೆಗೆ ಮೆರವಣಿಗೆಯಲ್ಲಿ ಕರೆ ತಂದರು.

ಇದೇ ಸಂಧರ್ಭದಲ್ಲಿ ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ‌ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ,ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಡಾ.ಪುಟ್ಟರಾಜು, ಉಪಕುಲಪತಿ ರಂಗರಾಜ್, ಸಿಂಡಿಕೇಟ್ ಸದಸ್ಯ ಎಂ.ನಾಗರಾಜು, ಕಿರುತೆರೆ ನಟ ಮಧುಸಾಗರ್, ಅಖಿಲ ಪ್ರಕಾಶ್ ಹಾಗೂ ಮಳವಳ್ಳಿ ಮಹಾದೇವಸ್ವಾಮಿ ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!