ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವುದು ಬಹಳ ಸಂತಸ ತಂದಿದೆ. ನನ್ನ ಅವಧಿಯಲ್ಲಿ ಜಿಲ್ಲಾಡಳಿತ ಹಾಗೂ ಎಲ್ಲಾ ಅಧಿಕಾರಿಗಳು ಸಹ ಬಹಳ ಉತ್ತಮವಾಗಿ ಸಹಕರಿಸಿದ್ದೀರ ತಮ್ಮೆಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಎಸ್.ಅಶ್ವತಿ ತಿಳಿಸಿದರು.
ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ವತಿಯಿಂದ ನಿಕಟಪೂರ್ವ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀರಂಗಪಟ್ಟಣ ದಸರಾ, ಕುಂಭಮೇಳ ಹೀಗೆ ಅನೇಕ ದೊಡ್ಡ ಕಾರ್ಯಕ್ರಮಗಳಲ್ಲಿಯೂ ಸಹ ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಉತ್ತಮವಾಗಿ ಹಗಲು ರಾತ್ರಿ ಎನ್ನದೆ ನಿರ್ವಹಿಸಿದ್ದೀರಿ , ಇಡೀ ರಾಜ್ಯದಲ್ಲಿ ಮಂಡ್ಯ ಜಿಲ್ಲೆಗೆ ಉತ್ತಮವಾದ ಹೆಸರು ಇದೆ. ಅದಕ್ಕೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಕಾರ್ಯವೈಖರಿಯೇ ಕಾರಣವಾಗಿದೆ. ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಜಿಲ್ಲಾಡಳಿತಕ್ಕೆ ಎಡ ಮತ್ತು ಬಲ ಕೈಗಳು ಇದ್ದಹಾಗೆ. ಜಿಲ್ಲಾಡಳಿತದ ಕಾರ್ಯಕ್ರಮಗಳು ಯಶಸ್ವಿ ನಡೆಯಲು ಇವರ ಸಹಕಾರ ಬಹಳ ಅಗತ್ಯವಿದೆ ಎಂದರು.
ಮೇಲುಕೋಟೆಯ ವೈರಮುಡಿ ಉತ್ಸವ, ಕುಂಭಮೇಳ ಹಾಗೂ ಇನ್ನಿತರ ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸಿರುವ ಕಾರ್ಯಕ್ರಮಗಳು ಬಹಳ ಉತ್ತಮವಾಗಿ ಎಲ್ಲರ ಸಹಕಾರದೊಂದಿಗೆ ಆಗಿದೆ, ಇದು ಬಹಳ ಸಂತೋಷ ತಂದಿದೆ ಎಂದರು.
ಅನುಭವಿಗಳ ಸಹಕಾರ ಅಗತ್ಯ
ಜಿಲ್ಲೆಯಲ್ಲಿ ಹೆಚ್ಚು ಅನುಭವಿರುವ ಹಿರಿಯ ಹಾಗೂ ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿರುವ
ಅಧಿಕಾರಿಗಳು ಇದ್ದೀರಿ, ತಮ್ಮೆಲ್ಲರಿಂದ ಉತ್ತಮ ರೀತಿಯ ಸಹಕಾರದ ಅಗತ್ಯವನ್ನು ಬಯಸುತ್ತೇನೆ ಎಂದು ನೂತನ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಹೇಳಿದರು.
ಜಿಲ್ಲೆಯಲ್ಲಿಉತ್ತಮವಾಗಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಾಗ ನೂತನವಾಗಿ ಜಿಲ್ಲಾಧಿಕಾರಿಗಳಾಗಿ ನೇಮಕವಾಗಿ ಬರುವವರ ಮೇಲೆ ಬಹಳ ನಿರೀಕ್ಷೆಯ ಭಾರ ಹೆಚ್ಚು ಇರುತ್ತವೆ. ಜಿಲ್ಲಾಡಳಿತ ಎಂದರೆ ಹಲವಾರು ಸವಾಲುಗಳಿರುತ್ತವೆ. 20 ತಿಂಗಳುಗಳ ಕಾಲ ಅಶ್ವತಿ ಅವರ ಅವಧಿಯಲ್ಲಿ ಕೋವಿಡ್ ಸಮಯ, ಅತಿವೃಷ್ಟಿ ಹಾಗೂ ಉತ್ಸವಗಳು ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ ಎಂಬುದಕ್ಕೆ ಎಲ್ಲರ ಸಹಕಾರ ದೊರೆತಿರುವುದೆ ಕಾರಣವಾಗಿದೆ ಎಂದರು.
ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ, ರೈತರಿಗೆ, ಬಡವರಿಗೆ, ಅನುಕೂಲಕರವಾಗುವಂತಹ ರೀತಿಯಲ್ಲಿ ಕೆಲಸ ಮಾಡೋಣ. ಎಲ್ಲರೂ ಒಗ್ಗೂಡಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ನಿರ್ವಹಿಸೋಣ ಎಂದರು.
ಜಿ.ಪಂ. ಸಿಇಓ ಶಾಂತ ಎಲ್. ಹುಲ್ಮನಿ ಮಾತನಾಡಿ, ಜಿಲ್ಲಾಧಿಕಾರಿಗಳಾಗಿ ಅಶ್ವತಿ ಅವರ ಕಾರ್ಯವೈಖರಿ ಬಗ್ಗೆ ತಿಳಿದಿದ್ದೇನೆ ,ಅವರಿಂದ ಸಾಕಷ್ಟು ವಿಷಯಗಳನ್ನು ನಾನು ಸಹ ಕಲಿತಿದ್ದೇನೆ, ಅನೇಕ ಅಧಿಕಾರಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ನಾನು ಬಹಳ ಹತ್ತಿರದಿಂದ ಅಶ್ವತಿ ಅವರನ್ನು ನೋಡಿದ್ದೇನೆ. ಅವರ ಅವಧಿಯಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು, ಇವು ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದರು.
ಇದೆ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಮಾತನಾಡಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರದ ಅಪೇಕ್ಷೆಯನ್ನು ಈಡೇರಿಸುವಂತಹ ಹಂತದಲ್ಲಿ ರಾಜ್ಯಕ್ಕೆ ಮಾದರಿಯಾಗಿ ವಿಶೇಷ ಮಹಿಳಾ ಜಿಲ್ಲಾಧಿಕಾರಿಗಳಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಿದಂತಹ ಜಿಲ್ಲಾಧಿಕಾರಿ ಅಶ್ವತಿ ಅವರಿಗೆ ಜಿಲ್ಲಾಡಳಿತ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಮಂಡ್ಯ ಜಿಲ್ಲೆಗೆ ನೂತನವಾಗಿ ಜಿಲ್ಲಾಧಿಕಾರಿಗಳಾಗಿ ನೇಮಕವಾಗಿರುವ ಡಾ.ಹೆಚ್.ಎನ್.ಗೋಪಾಲಕೃಷ್ಣ ಅವರಿಗೂ ಸ್ವಾಗತ ಕೋರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅರಣ್ಯ ಉಪ ಸಂರಕ್ಷಣಾಧಿಕಾರಿ ರುದ್ರೇನ್, ಪಾಂಡವಪುರ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ, ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕ ಸ್ವಾಮಿಗೌಡ ಉಪಸ್ಥಿತರಿದ್ದರು.




