ಇಂದು ಮಂಡ್ಯದ ನಗರದಲ್ಲಿ ಮುಸ್ಲಿಂ ಸಮುದಾಯದ ವಿರುದ್ದ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ದ ಪಾಪುಲ್ಯರ್ ಫ್ರಂಟೆ ಅಫ್ ಇಂಡಿಯಾ ಸಂಘಟನೆ ಪ್ರತಿಭಟನೆ ನಡೆಸಿತು.
ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಗೋವಾ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಘಟನೆಗಳು ನಡೆದುಬಿಟ್ಟಿವೆ. ಕೆಲವು ವರ್ಗಗಳು ಧಾರ್ಮಿಕ ಸಮಾರಂಭಗಳನ್ನು ಹಿಂಸಾತ್ಮಕವಾಗಿ ಪರಿವರ್ತಿಸಲು ಸಂಘಟಿತ ಪ್ರಯತ್ನಗಳನ್ನು ನಡೆಸುತ್ತಿವೆ. ದೇಶದಲ್ಲಿ ನೂರಾರು ವಿವಿಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬಗಳು ನಡೆಯುತ್ತಿದ್ದು, ಎಂದಿನಂತೆ ಅವು ಶಾಂತಿಯುತವಾಗಿ ಮುಕ್ತಾಯಗೊಳ್ಳುತ್ತವೆ. ಸಾಂಪ್ರದಾಯಿಕವಾಗಿ ಇಂತಹ ಘಟನೆಗಳನ್ನು ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಬಲಪಡಿಸುವ ಅವಕಾಶಗಳಾಗಿ ನಡೆಸಲಾಗುತ್ತಿತ್ತು.
ಆದಾಗ್ಯೂ, ಹಿಂದುತ್ವ ಕೋಮು ಶಕ್ತಿಗಳು ದೇಶದ ವಿವಿಧ ಕಡೆಗಳಲ್ಲಿ ಹಿಂದು ಹಬ್ಬಗಳನ್ನು ಇತರ ಸಮುದಾಯಗಳ ವಿರುದ್ಧ ದ್ವೇಷ ಮತ್ತು ಹಿಂಸಾಚಾರ ನಡೆಸುವ ಅವಕಾಶಕ್ಕಾಗಿ ಮತ್ತು ರಾಜಕೀಯ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದು ನಿರ್ದಿಷ್ಟ ವರ್ಗಗಳ ಮೂಲಕ ದ್ವೇಷವನ್ನು ಹರಡಲು ಮತ್ತು ಕೋಮು ಧ್ರುವೀಕರಣವನ್ನು ಸೃಷ್ಟಿಸಲು ನಡೆಸಲಾಗುತ್ತಿರುವ ಪಿತೂರಿಯಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿವೆ. ರಾಮನವಮಿ ಆಚರಣೆಗಳ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ವ್ಯಾಪಕ ಪ್ರಚೋದನೆ, ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಿಗೆ ದೇಶವು ಸಾಕ್ಷಿಯಾಯಿತು. ಈ ಘಟನೆಗಳ ಬಹುತೇಕ ಸ್ವರೂಪ ಒಂದೇ ತೆರನಾಗಿತ್ತು. ಎಲ್ಲಾ ಕಡೆಗಳಲ್ಲೂ ವಿಧಾನ ಒಂದೇ ರೀತಿಯದ್ದಾಗಿತ್ತು. ಮುಸ್ಲಿಮ್ ಬಾಹುಳ್ಯ ಕ್ಷೇತ್ರಗಳ ಮೂಲಕ ರ್‍ಯಾಲಿ ನಡೆಸಲಾಯಿತು, ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾಯಿತು ಮತ್ತು ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸಲಾಯಿತು. ರಾಜಸ್ತಾನ ಮತ್ತು ಮಧ್ಯ ಪ್ರದೇಶದಲ್ಲಿ ನಡೆದ ಘಟನೆಗಳಲ್ಲಿ ಮುಸ್ಲಿಮರಿಗೆ ಸೇರಿದ ಮಸ್ಜಿದ್, ಮನೆ ಮತ್ತು ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಲಾಯಿತು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದರಲ್ಲಿ ಬಹುತೇಕ ಘಟನೆಗಳನ್ನು ಮುನ್ನೆಚ್ಚರಿಕೆಯಿಂದ ಮತ್ತು ಪೊಲೀಸರು ಹಾಗೂ ಅಧಿಕಾರಿಗಳ ಮಧ್ಯಪ್ರವೇಶದೊಂದಿಗೆ ತಡೆಯಬಹುದಾಗಿತ್ತು. ಆದರೆ ಬಹಳಷ್ಟು ಕಡೆಗಳಲ್ಲಿ ಹೀಗೆ ನಡೆಯಲಿಲ್ಲ. ವಿಪರ್ಯಾಸವೆಂದರೆ, ಕೆಲವೊಂದು ಘಟನೆಗಳಲ್ಲಿ ಹಿಂಸೆಮಾಡುವ ಗುಂಪುಗಳಿಗೆ ಪೊಲೀಸರು ಕೂಡ ನೆರವು ಮತ್ತು ಕುಮ್ಕಕ್ಕು ನೀಡಿದರು ಎಂದು ಸಂತ್ರಸ್ತರು ದೂರಿದ್ದಾರೆ. ಅನೇಕ ವರದಿಗಳ ಪ್ರಕಾರ, ಈ ಘಟನೆಗಳ ಬಳಿಕ ಪೊಲೀಸರು ಅಲ್ಪಸಂಖ್ಯಾತರ ವಿರುದ್ಧ ಕೈಗೊಂಡ ಕ್ರಮ ತಾರತಮ್ಯದಿಂದ ಕೂಡಿದೆ. ಮಕ್ಕಳು ಮತ್ತು ವೃದ್ಧ ಮಹಿಳೆಯರೂ ಪೊಲೀಸರ ಕಿರುಕುಳವನ್ನು ಎದುರಿಸಿದ್ದಾರೆ. ಹಿಂಸಾಚಾರದ ಬಳಿಕ ಮಧ್ಯ ಪ್ರದೇಶದ ಖರ್ಗೋನೆಯಲ್ಲಿ, ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆಯೇ ಮುಸ್ಲಿಮರ ಹಲವಾರು ಮನೆ ಮತ್ತು ಮಸ್ಜಿದ್ ಸ್ವತ್ತುಗಳನ್ನು ಪೊಲೀಸರೇ ಧ್ವಂಸಗೊಳಿಸಿದರು. ಇದು ಪೊಲೀಸರು ಮತ್ತು ಆಡಳಿತ ವ್ಯವಸ್ಥೆಯು ಮಾಡುತ್ತಿರುವ ತಾರತಮ್ಯ ಮತ್ತು ಪಕ್ಷಪಾತಿ ಧೋರಣೆ ಎಂದು ಜಿಲ್ಲಾಡಳಿತಕ್ಕೆ ಪಾಪುಲ್ಯರ್ ಫ್ರಂಟೆ ಅಫ್ ಇಂಡಿಯಾ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿದರು.
ಇಂತಹ ದ್ವೇಷ ಪ್ರಚೋದಕರು ಹಾಗೂ ಸಾಮರಸ್ಯದ ಕದಡುವವರನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶವನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆಯನ್ನು ಖಾತರಿಪಡಿಸಬೇಕು. ಒಂದು ಸಮುದಾಯದ ವ್ಯಾಪಾರ ವಹಿವಾಟನ್ನು ಕಸಿದುಕೊಳ್ಳುವುದು ಬದುಕನ್ನೆ ಕಸಿಯುವುದಷ್ಟೇ ಆಗಿದೆ. ಇದು ಅಸಂವಿಧಾನಿಕವಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಸಯ್ಯದ್ ಇರ್ಫಾನ್.ಕಾರ್ಯದರ್ಶಿ ಇಬ್ರಾಹಿಂ. SDPI ಜಿಲ್ಲಾಧ್ಯಕ್ಷರಾದ ಸಾದತ್. ಕಾರ್ಯದರ್ಶಿ ಮುಕ್ತರ್. ಅಸ್ಗರ್ ಅಹಮದ್. ಕರ್ನಾಟಕ ಜನಶಕ್ತಿಯ ಸಿದ್ದರಾಜು. ವಕೀಲರಾದ ಲಕ್ಷ್ಮಣ್. ಮಾಜಿ ಜಿಲ್ಲಾಧ್ಯಕ್ಷರಾದ ರಪೀಕ್. ದಾದಾಪೀರ್. ವಕೀಲರಾದ ನಧೀಂ ಮುಂತಾದವರು ಇದ್ದರು.