ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಸ್ಥಳೀಯ ಸಂಸ್ಥೆಗಳು ಜಾತಿ ಮತ್ತು ರಾಜಕೀಯ ಮುಕ್ತವಾಗಿ ಕೆಲಸ ಮಾಡಬೇಕು ಎಂದು ಹಾಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ನಡಕಲಪುರ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಹಾಡ್ಲಿ – ಮೇಗಳಾಪುರ ಸರ್ಕಲ್ ಸಂತೆ ಮೈದಾನದಲ್ಲಿ ಹಾಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಎಂದರೆ ಕೇವಲ ಚರಂಡಿ ಮಾಡಿಸುವುದು, ಬೀದಿ ದೀಪ ಅಳವಡಿಸುವುದು ಅಲ್ಲ, ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸ್ವಚ್ಛತೆ, ಆರೋಗ್ಯ, ಶಿಕ್ಷಣ ಮತ್ತು ವಾಸಿಸುವ ಜನರ ಆರ್ಥಿಕ ಸದೃಢತೆ ಇವು ಅಭಿವೃದ್ಧಿಯ ಮಾನದಂಡವಾಗಬೇಕು, ಈ ನಿಟ್ಟಿನಲ್ಲಿ ಹಾಡ್ಲಿ ಗ್ರಾಮ ಪಂಚಾಯಿತಿ ಕೆಲಸ ಮಾಡುತ್ತಿದೆ, ಪಂಚಾಯಿತಿ ವ್ಯಾಪ್ತಿಯ ಕೇಂದ್ರ ಭಾಗದಲ್ಲಿ ಗ್ರಂಥಾಲಯ ತೆರೆಯುವುದು, ಸಾರ್ವಜನಿಕ ಶೌಚಾಲಯ ನಿರ್ಮಾಣ, ಮನೆಮನೆಗೆ ತೆರಳಿ ಕಸ ಸಂಗ್ರಹ ಮಾಡುವ ಗುರಿ ಹೊಂದಿದ್ದು, ಇದರ ಪೂರ್ವ ತಯಾರಿಯಲ್ಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಕೃಷ್ಣಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೀರಭದ್ರಪ್ಪ, ಬಿಇಒ ಉಮಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್, ವೃತ್ತ ನಿರೀಕ್ಷಕ ಶ್ರೀಧರ್, ಗ್ರಾ.ಪಂ.ಸದಸ್ಯರಾದ ಮಂಜು ಬೈರೇಶ್, ಲಿಂಗರಾಜು, ಕೋಮಲ, ಮಂಜುಳ, ಚಿಕ್ಕಣ್ಣ, ಪಿಡಿಒ ಲಿಂಗರಾಜು ಸೇರಿದಂತೆ ಇತರರಿದ್ದರು.




