Thursday, September 19, 2024

ಪ್ರಾಯೋಗಿಕ ಆವೃತ್ತಿ

ಉತ್ತಮ ಫಲಿತಾಂಶ ದಾಖಲಿಸಲು ಪ್ರಾಂಶುಪಾಲರ ಪರಿಶ್ರಮ : ಮರಿತಿಬ್ಬೇಗೌಡ 

ಪದವಿಪೂರ್ವ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಪ್ರಾಂಶುಪಾಲರು ಹೆಚ್ಚಿನ ಪರಿಶ್ರಮ ಹಾಕುತ್ತಿದ್ದಾರೆಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಪ್ರಶಂಸಿಸಿದರು.

ಮಂಡ್ಯ ನಗರದ ಎಸ್.ಬಿ.ಸಮುದಾಯ ಭವನದಲ್ಲಿ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

nudikarnataka.com

ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಂಘಟನೆಗಳು ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಮಾಡಿ ಸದಾ ಚಟುವಟಿಕೆಯಲ್ಲಿರುತ್ತವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಂಶುಪಾಲರು ಶ್ರಮಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಾಂಶುಪಾಲರ-ಉಪನ್ಯಾಸಕರ ಸಮಸ್ಯೆಗಳು ಸಾಕಷ್ಟು ಇವೆ, ಹಂತ ಹಂತವಾಗಿ ಬಗೆಹರಿಯುತ್ತಿದ್ದರೂ ಸರ್ಕಾರದ ಹೊಸ ಹೊಸ ಯೋಜನೆಗಳಿಂದ ಹೊಸ ಹೊಸ ಸಮಸ್ಯೆಗಳು ಉಲ್ಬಣವಾಗುತ್ತಿವೆ ಎಂದರು.

ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಪದವಿಪೂರ್ವ ಶಿಕ್ಷಣ ಎಲ್ಲಿದೆ ? ಅದರ ಮುಂದಿನ ಅಸ್ಥಿತ್ವವೇನು ? ಎನ್ನುವ ಬಗ್ಗೆ ನಾವು ಗಂಭೀರವಾಗಿ ಚರ್ಚೆ ಮಾಡಬೇಕಾದ ಅನಿವಾರ್ಯತೆ ಇದೆ, ಹೊಸ ಶಿಕ್ಷಣ ನೀತಿ ಬಂದ ಮೇಲೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ ಎಂದರು.

nudikarnataka.com

ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿದೆ, ಈ ಹಿಂದೆ ಒಂದು ಮಗು 6ನೇ ವಯಸ್ಸಿಗೆ ಶಾಲೆಗೆ ದಾಖಲಾಗುತ್ತಿತ್ತು, ಆದರೆ ಈಗ 4ನೇ ವರ್ಷಕ್ಕೆ ದಾಖಲಾಗುತ್ತಿದೆ, 1ರಿಂದ 5ಕ್ಕೆ ಪ್ರಾಥಮಿಕ, 6ರಿಂದ 8ಕ್ಕೆ ಮಾಧ್ಯಮಿಕ, 9ರಿಂದ 12 ಪ್ರೌಢ ಶಿಕ್ಷಣವಾಗಿದೆ, ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಗೆ ಪ್ರತ್ಯೇಕ ಪರೀಕ್ಷಾ ಮಂಡಳಿ ಇರುವುದು ನಿಮ್ಮೆಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.

ಪದವಿಪೂರ್ವ ಶಿಕ್ಷಣವನ್ನು ಶಾಲಾ ಶಿಕ್ಷಣಕ್ಕೆ ವಿಲೀನಗೊಳಿಸಲು ನಾವು ಬಿಟ್ಟಿಲ್ಲ, ಕಾರಣ ನಮ್ಮ ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆ ದೇಶಕ್ಕೆ ಮಾದರಿಯಾಗಿದೆ. ಪದವಿ ಶಿಕ್ಷಣಕ್ಕೆ, ಪದವಿ ಪೂರ್ವ ಶಿಕ್ಷಣ ಪೂರಕವಾಗಿದೆ, ಬೌದ್ದಿಕ ವಿಕಾಸಕ್ಕೆ ತಳಹದಿಯಾಗಿದೆ, ಪೂರ್ವ ಸಿದ್ದತಾ ಶಿಕ್ಷಣವಾಗಿ ಅನುಕೂಲಕರವಾಗಿದೆ ಎಂದು ನುಡಿದರು.

ಸಮಾರಂಭವನ್ನು ಶಾಸಕ ಮಧು ಜಿ.ಮಾದೇಗೌಡ ಉದ್ಘಾಟಿಸಿದರು. ಗಣ್ಯರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಉಮೇಶ್, ಎಸ್.ಬಿ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಶಿವಲಿಂಗಯ್ಯ, ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಹನುಮಂತಯ್ಯ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಿ.ನಾಗರಾಜು, ಪ್ರ.ಕಾರ್ಯದರ್ಶಿ ಡಿ.ಕೆ.ಶಿವರಾಮು, ಖಜಾಂಚಿ ಡಿ.ಗುರುಲಿಂಗೇಗೌಡ, ಶ್ರೀಶಂಭು ಸೇವಾ ಟ್ರಸ್ಟ್ ಮುಖ್ಯಸ್ಥ ಸುರೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!