ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ 5ನೇ ಬಾರಿ ಆಯ್ಕೆ ಬಯಸಿ ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ಹೆಚ್.ಸಿ. ಮಹದೇವಪ್ಪ, ಚಲುವರಾಯ ಸ್ವಾಮಿ, ಮಧು ಬಂಗಾರಪ್ಪ, ವೆಂಕಟೇಶ್ ಸೇರಿದಂತೆ ಇತರ ಸಚಿವರು ಭಾಗವಹಿಸಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮರಿತಿಬ್ಬೇಗೌಡ, ಕಳೆದ 4 ಬಾರಿ ಪರಿಷತ್ಗೆ ಆಯ್ಕೆಯಾಗಿ ಶಿಕ್ಷಕರ ಧ್ವನಿಯಾಗಿರುವೆ. ಇದೀಗ 5ನೇ ಬಾರಿಗೆ ಅವಕಾಶವನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಹಾಗಾಗಿ ಎಲ್ಲ ನಾಯಕರಿಗೂ ಅಭಿನಂದನೆ ಸಲ್ಲಿಸುವೆ. ಈ ಬಾರಿಯೂ ಶಿಕ್ಷಕ ಬಂಧುಗಳು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದಿದ್ದು ವಿಶೇಷ. ಮುಖ್ಯವಾಗಿ ಕಳೆದ 4 ಬಾರಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೇನೆ. ಈ ಬಾರಿ ಆಡಳಿತ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಸಂತೋಷ ತಂದಿದೆ ಎಂದರು.

ಕಾಂಗ್ರೆಸ್ ಗೆಲ್ಲುವ ಸಂಭವವಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅದುವೇ ನನ್ನ ಗೆಲುವಿಗೆ ಸಹಾಯಕವಾಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಶಿಕ್ಷಕರು ಪದವೀಧರರಾಗಿದ್ದು ಯಾವುದು ತಪ್ಪು, ಯಾವುದು ಸರಿ ಎಂಬ ವಿಚಾರದ ಬಗ್ಗೆ ಗೊತ್ತಿರುತ್ತದೆ. ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಸಂಭವವಿದೆ ಎಂದು ಅಭಿಪ್ರಾಯಪಟ್ಟರು.
ಮೊದಲ ಬಾರಿಗೆ ಪಕ್ಷೇತರರಾಗಿ ದಕ್ಷಿಣ ಶಿಕ್ಷಕ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮರಿತಿಬ್ಬೇಗೌಡ, ಬಳಿಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ, ಅನಂತರ ಎರಡು ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈಗ 5ನೇ ಬಾರಿ ಕಾಂಗ್ರೆಸ್ನಿಂದ ಅಖಾಡಕ್ಕಿದಿರುವುದು ಸಂತೋಷ ತಂದಿದ್ದು,ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರವಿಶಂಕರ್, ತನ್ವೀರ್ ಸೇಠ್,ಹರೀಶ್ ಗೌಡ, ಶಿವಲಿಂಗೇಗೌಡ, ಕೃಷ್ಣಮೂರ್ತಿ, ಎಂಎಲ್ಸಿ ಪುಟ್ಟಣ್ಣ, ಪುಷ್ಪ ಅಮರ್ ನಾಥ್, ಬಿ.ಸುರೇಶ್ ಮತ್ತಿತರರಿದ್ದರು.




