Tuesday, November 24, 2026

ಪ್ರಾಯೋಗಿಕ ಆವೃತ್ತಿ

ಒಳಮೀಸಲಾತಿ ವಂಚನೆ ವಿರುದ್ದ ಮಾ.12 ಕ್ಕೆ ಬೃಹತ್ ಹೋರಾಟ : ಸಿ.ಕೆ.ಪಾಪಯ್ಯ

ಕರ್ನಾಟಕ ಸಮಸ್ತ ಒಳಮೀಸಲಾತಿ ಹೊರಾಟಗಾರರ ನೇತೃತ್ವದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಮಾ.೧೨ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಮಿತಿಯ ಜಿಲ್ಲಾಧ್ಯಕ್ಷ ಸಿ.ಕೆ.ಪಾಪಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಪಡೆದು ಅನುಮೋದನೆ ದೊರೆತಿದೆ. ಈ ವೇಳೆ ೫೦ ಸಾವಿರ ಹುದ್ದೆಗಳನ್ನು ಹಿಂದಿನ ಮೀಸಲಾತಿಯಂತೆ ಭರ್ತಿ ಮಾಡುವ ಸಂಪುಟ ಸಭೆಯ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ದ್ರೋಹ ಎಂದು ಖಂಡಿಸಿದರು.

ಸರಕಾರ ಬಂದ ಮೊದಲ ಅಧಿವೇಶನದಲ್ಲೇ ಒಳಮೀಸಲಾತಿಯ ಭರವಸೆ ನೀಡಿದ ಕಾಂಗ್ರೆಸ್ ಚಿತ್ರದುರ್ಗದ ಸಮಾವೇಶದಲ್ಲಿಯೂ ಅದೇ ಭರವಸೆ ನೀಡಿ ಎರಡು ವರ್ಷ ಕಳೆದರೂ ಒಳಮೀಸಲಾತಿ ಜಾರಿಯ ಪ್ರಯತ್ನವನ್ನೂ ಮಾಡಿರಲಿಲ್ಲ. ಅಂತಿಮವಾಗಿ ಸುಪ್ರೀಂ ತೀರ್ಪಿನ ನಂತರದ ಹೋರಾಟಕ್ಕೆ ಮಣಿದ ರಾಜ್ಯದ ಕಾಂಗ್ರೆಸ್ ಸರಕಾರ ಒಳಮೀಸಲಾತಿ ಜಾರಿಗೆ ಅಂಕಿತ ಪಡೆದಿದೆ ಎಂದು ಹೇಳಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಎನ್.ಆರ್.ಚಂದ್ರಶೇಖರ್ ಮಾತನಾಡಿ, ೫೬, ೪೩೨ ಹುದ್ದೆಗಳ ಭರ್ತಿಗೆ ಮುಂದಾಗಿರುವ ಸರಕಾರ ಮಾದಿಗ ಸಂಬಂಧಿತ ಜಾತಿಗಳಿಗೆ ಸಿಗಬೇಕಾದ ೩,೩೮೭ಕ್ಕೂ ಹೆಚ್ಚಿನ ಹುದ್ದೆಗಳನ್ನು ತಪ್ಪಿಸಲು ಹುನ್ನಾರ ನಡೆಸಿದೆ. ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಸಚಿವರೇ ಒಳಮೀಸಲಾತಿಗೆ ಅಡ್ಡಲಾಗಿ ನಿಂತಿದ್ದಾರೆ. ಸಾಮಾಜಿಕ ನ್ಯಾಯ ಒದಗಿಸುವ ಬದಲು ಪಕ್ಷಪಾತೀಯವಾಗಿ ಸರಕಾರ ನಡೆದುಕೊಳ್ಳುತ್ತಿದೆ. ಇದನ್ನು ಸಹಿಸದೇ ಪ್ರಜ್ಞಾವಂತ ಸಮುದಾಯ ಸಮಾಜ.೧೨ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸುತ್ತಿದೆ ಎಂದು ಎಂದರು.

ಈ ಕೂಡಲೇ ಒಳಮೀಸಲಾತಿ ಸಂಬಂಧ ಫೆ.೨೭ರಂದು ಹೊರಡಿಸಿರುವ ಸಚಿವ ಸಂಪುಟ ನಿರ್ಧಾರದ ಆದೇಶ ಹಿಂಪಡೆಯಬೇಕು. ರಾಜ್ಯದ ಶೇ.೫೬ರ ಮೀಸಲಾತಿ ಸಂರಕ್ಷಣೆಗಾಗಿ ಸರ್ವಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರಕಾರಕೆಕ ಮನವಿ ಮಾಡಿ ಸಂವಿಧಾನ ೯ನೇ ಅನುಸೂಚಿಯಲ್ಲಿ ಸೇರಿಸಲು ಕ್ರಮವಹಿಸಬೇಕು. ಈ ನಿಯಮವನ್ನು ೨೦೦೧ರ ನಂತರ ನೇರ ನೇಮಕಾತಿ, ಬಡ್ತಿ ನೇಮಕಾತಿ, ಮುಂಬಡ್ತಿ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಮುಂದುವರೆಸಬೇಕು. ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಒಳಮೀಸಲಾತಿ ಸಂಪೂರ್ಣ ಜಾರಿಯಾಗಬೇಕು. ವಿಶ್ವವಿದ್ಯಾಲಯಗಳು ನೇಮಕಾತಿಯ ಒಂದು ಘಟಕ ಎಂದು ಪರಿಗಣಿಸಬೇಕು. ಅಲೆಮಾರಿ ಸಮುದಾಯಗಳಿಗೆ ಶೇ.೧ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸದೇ ಪಕ್ಷಪಾತೀಯವಾಗಿ ನಡೆದುಕೊಳ್ಳುತ್ತಿರುವ ಸಚಿವರನ್ನು ಕೂಡಲೇ ಬದಲಾಯಿಸಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ  ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಎನ್.ಕಾಂತರಾಜು, ಮುಖಂಡರಾದ ಬಿ.ಕೃಷ್ಣ,ಸಿ.ಕೆಂಪಯ್ಯ ಹಾಗೂ ಅಂಬುಜಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ