Thursday, November 19, 2026

ಪ್ರಾಯೋಗಿಕ ಆವೃತ್ತಿ

ಎಂಬಿಬಿಎಸ್, ಬಿಇ ಕೋರ್ಸ್ ಶುಲ್ಕ ಇಳಿಸಲು ಇಂಡುವಾಳು ಸಚ್ಚಿದಾನಂದ ಆಗ್ರಹ

ವೈದ್ಯಕೀಯ,ದಂತ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಗಳ ಸರ್ಕಾರದ ಶುಲ್ಕ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಿದ್ದು, ಶುಲ್ಕದ ಪ್ರಮಾಣವನ್ನು ಸರ್ಕಾರ ಇಳಿಸಬೇಕು ಎಂದು ಬಿಜೆಪಿ ಮುಖಂಡ ಇಂಡುವಾಳ ಎಸ್. ಸಚ್ಚಿದಾನಂದ ಆಗ್ರಹಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ, ಮೆರಿಟ್ ಆಧಾರದ‌ ಮೇಲೆ ವೈದ್ಯಕೀಯ‌ ಶಿಕ್ಷಣ ಕೋರ್ಸ್ ಗೆ ಸರ್ಕಾರಿ ಸೀಟು ಪಡೆದಿರುವ ಯತೀಂದ್ರ ಮುಕುಂದ ಮತ್ತು ದಿಶಾ ಎನ್ ಅವರಿಗೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್ ವಿತರಿಸಿ, ಅಭಿನಂದಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳು ಮೆರಿಟ್ ಆಧಾರದ ಮೇಲೆ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್, ಇಂಜಿನಿಯರಿಂಗ್ ಇತರ ತಾಂತ್ರಿಕ ಶಿಕ್ಷಣ ಕೋರ್ಸ್ ಗಳಿಗೆ ಸೀಟು ಪಡೆದರೂ ಸದ್ಯ ಇರುವ ಶುಲ್ಕ ಭರಿಸಲು ಕಷ್ಟವಾಗಿದೆ.ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಯಾವುದೇ ಗ್ರಾಮದ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ ಗೆ ಆಯ್ಕೆಯಾಗಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ, ಉತ್ತಮ ದರ್ಜೆಯ ಲ್ಯಾಪ್‌ಟಾಪ್ ನೀಡಲಾಗುತ್ತದೆ. ಅಂತಹವರು ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರೇಗೌಡ ಮಾತನಾಡಿ,ಯುವ ನಾಯಕ ಇಂಡುವಾಳು ಸಚ್ಚಿದಾನಂದ ಅವರು ಅವರ ತಂದೆಯ ಹೆಸರಿನಲ್ಲಿ ಸ್ಥಾಪಿಸಿರುವ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಹಲವು ವರ್ಷಗಳಿಂದ ಬಡ ಜನರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕುಸ್ತಿಪಟು ಪೈ. ಮುಕುಂದ, ಪಿಎಸಿಎಸ್ ಮಾಜಿ ಅಧ್ಯಕ್ಷ ನಾಗರಾಜು, ಗ್ರಾ.ಪಂ. ಸದಸ್ಯರಾದ ಟೆಂಪೊ ಪ್ರಕಾಶ್, ರೇಖಾ, ಗಾಯತ್ರಿ, ಲೋಕೇಶ್, ಮಂಜುಳಾ, ಮಾಜಿ ಸದಸ್ಯ ಗಿರೀಶ್, ಮುಖಂಡರಾದ ಪಿ.ಎಚ್. ಚಂದ್ರಶೇಖರ್, ಸುಖೇಶ್, ಶೇಖರ್, ಯಜಮಾನ್ ಶ್ರೀಧರ್, ಪೈ. ಉಮೇಶ್, ಸಂಜೀವಣ್ಣ, ಪ್ರಗತಿ ಪರ ರೈತ ರೇಡಿಯೋ ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ