Saturday, November 21, 2026

ಪ್ರಾಯೋಗಿಕ ಆವೃತ್ತಿ

ಮೆಗಾ ಡೇರಿಯಿಂದ ರೈತರಿಗೆ ಹೆಚ್ಚಿನ ಲಾಭ : ಬಿ.ಆರ್.ರಾಮಚಂದ್ರು

260.90 ಕೋಟಿ ರೂ. ವೆಚ್ಚದ ಮೆಗಾ ಡೇರಿ ನಿರ್ಮಾಣದಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ತಿಳಿಸಿದರು.

ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮನ್ಮುಲ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮೆಗಾ ಡೈರಿ ಆರಂಭದಿಂದ ಕಡಿಮೆ ಕಾರ್ಮಿಕರಿಂದ ಹೆಚ್ಚು ಹಾಲು ವಿಲೇವಾರಿಗೆ ಅವಕಾಶಗಳಿದ್ದು, ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಭವಿಷ್ಯದಲ್ಲಿ ಹಾಲು ಉತ್ಪಾದಕರಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ತಿಳಿಸಿದರು.

ಮೆಗಾ ಡೇರಿಗೆ ಕೆ.ಎಂ.ಎಫ್ 10 ಕೋಟಿ ರೂ. ನೆರವು ನೀಡಿದ್ದು, ಉಳಿಕೆ ಹಣವನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳು ಭರಿಸಿವೆ. 5 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಒಕ್ಕೂಟದಲ್ಲಿ ಪ್ರಸ್ತುತ 9 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಮೆಗಾ ಡೇರಿ ಸ್ಥಾಪನೆಯಿಂದ ದಿನವಹಿ 10 ಲಕ್ಷ ಲೀಟರ್ ನಿಂದ 14 ಲಕ್ಷ ಲೀ.ಸಂಸ್ಕರಣಾ ಸಾಮರ್ಥ್ಯ ವಿಸ್ತರಣೆಯಾಗಿದೆ. ಪ್ರತಿ ನಿತ್ಯ 30.0 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಉತ್ಪಾದನಾ ಘಟಕದ ಸ್ಥಾಪನೆಯಾಗಿದೆ. ದಿನವಹಿ 6 ಲಕ್ಷ ಲೀ‌. ಹಾಲು ಪ್ಯಾಕಿಂಗ್ ಘಟಕ, 2.0 ಲಕ್ಷ ಲೀ‌. ಸಾಮರ್ಥ್ಯದ ಯು ಎಚ್ ಟಿ ಘಟಕ ಸ್ಥಾಪನೆ ಮಾಡಲಾಗಿದೆ ಎಂದರು.

ಮನ್ಮುಲ್ ವಹಿವಾಟು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಡಿಯಲ್ಲಿ ಪ್ರಸ್ತುತ 1,289 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಈ ಪೈಕಿ 1,276 ಸಂಘಗಳು ಸಕ್ರಿಯವಾಗಿವೆ. 576 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳನ್ನು ಹೊಂದಿರುವುದು ಹೆಮ್ಮೆಯ ವಿಷಯ ಎಂದು ಪ್ರಶಂಸಿಸಿದರು.

ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಟ್ಟು 2,71,846 ಷೇರುದಾರರಿದ್ದು, ಈ ಪೈಕಿ 99,917 ಸಕ್ರಿಯ ಹಾಲು ಉತ್ಪಾದಕ ಸದಸ್ಯರಿಂದ ಪ್ರತಿ ದಿನ ಹಾಲು ಶೇಖರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ದಿನನಿತ್ಯ ಸರಾಸರಿ 9.26 ಲಕ್ಷ ಕೆ.ಜಿ. ಹಾಲು ಶೇಖರಿಸಲಾಗುತ್ತಿದೆ ಎಂದು ವಿವರಿಸಿದರು.

ಹಾಲು ಶೇಖರಣೆಯಲ್ಲಿ ಗರಿಷ್ಠ ದಿನವಹಿ 10.41 ಲಕ್ಷ ಕೆ.ಜಿ. ಹಾಲು ಶೇಖರಣೆಯಾಗಿದ್ದು, ಒಕ್ಕೂಟದ ಸಂಘಗಳಿಗೆ 6,864.06 ಲಕ್ಷ ಮೊತ್ತವನ್ನು ಬಟವಾಡೆ ಮಾಡಲಾಗಿರುತ್ತದೆ. 2021-22 ನೇ ಸಾಲಿನಲ್ಲಿ ಜಿಲ್ಲೆಯ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ಯೋಜನೆಯಡಿ 142.94 ಕೋಟಿ ಹಣ ನೀಡಲಾಗಿದೆ ಎಂದು ತಿಳಿಸಿದರು.

ಕ್ಷೀರಭಾಗ್ಯ ಯೋಜನೆಯಡಿ 2021-22 ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಒಟ್ಟು 493.08 ಟನ್ ಹಾಗೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 317.93 ಟನ್ ನಂತೆ ಒಟ್ಟು 22.59 ಕೋಟಿ ಮೊತ್ತದ 811.01 ಮೆಟ್ರಿಕ್ ಟನ್ ಹಾಲಿನ ಪುಡಿ ವಿತರಿಸಲಾಗಿದೆ ಎಂದರು.

2021-22 ರಲ್ಲಿ 5773 ಟನ್ ಕೆನೆರಹಿತ ಹಾಲಿನ ಪುಡಿ, 2724 ಟನ್ ಕೆನೆಭರಿತ ಹಾಲಿನ ಪುಡಿ, 3127 ಟನ್ ಬೆಣ್ಣೆ, 1675 ಟನ್ ತುಪ್ಪವನ್ನು ಮಾರಾಟ ಮಾಡಲಾಗಿದೆ. 2021-22 ನೇ ಸಾಲಿನಲ್ಲಿ ಒಟ್ಟು 13,1519.06 ಲಕ್ಷ ವಹಿವಾಟು ನಡೆಸಿದ್ದು, 713 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮನ್‌ಮುಲ್ ಉಪಾಧ್ಯಕ್ಷ ರಘುನಂದನ್, ನಿರ್ದೇಶಕರಾದ ಡಾಲು ರವಿ, ನೆಲ್ಲಿಗೆರೆ ಬಾಲು, ರೂಪಾ, ಕೋಟಿ ರವಿ, ಬೋರೇಗೌಡ, ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ