Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಅನುಮತಿ ನೀಡಿದರೆ, ತಕ್ಷಣವೇ ಮೇಕೆದಾಟು ಅಣೆಕಟ್ಟೆ ಕಾಮಗಾರಿ ಪ್ರಾರಂಭ- ಚಲುವರಾಯಸ್ವಾಮಿ

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ನಾಳೆಯೇ ಅನುಮತಿ ನೀಡಿದರೆ, ಸೋಮವಾರದಿಂದಲೇ ನಾವು ಕಾಮಗಾರಿ ಪ್ರಾರಂಭಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಈಗಾಗಲೇ ಮೇಕೆದಾಟು ವಿಚಾರವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಸ್ತಾಪ ಮಾಡಿದ್ದೇವೆ. ನ್ಯಾಯಾಲಯ ಸಹಟ ಅನಗತ್ಯವಾಗಿ ಸಮುದ್ರ ಪಾಲಾಗುವ ನೀರನ್ನು ಸಂಗ್ರಹಿಸಲು ನಿಮ್ಮ ತಕರಾರು ಏಕೆ ಎಂದು ತಮಿಳುನಾಡಿಗೆ ಪ್ರಶ್ನಿಸಿದೆ. ಅವರೂ ಸಹ ಇದರಿಂದ ನಮಗೆ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಮತ್ತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚನೆ ನೀಡಿದೆ ಎಂದರು.

ಈ ಹಿನ್ನೆಲೆಯಲ್ಲಿ ನಾವು ಸುಪ್ರೀಂಕೋರ್ಟ್ ಮತ್ತು ಕಾವೇರಿ ನದಿ ನಿರ್ವಹಣಾ ಸಮಿತಿ ಮುಂದೆ ಅರ್ಜಿ ಸಲ್ಲಿಸಿ ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡುತ್ತೇವೆ. ಒಂದು ವೇಳೆ ಬಿಜೆಪಿಯವರು ಇಂದೋ ಅಥವಾ ನಾಳೆಯೋ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅನುಮತಿ ನೀಡಿದ ತಕ್ಷಣದಿಂದಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅಗತ್ಯವಾದ ಸಂಪನ್ಮೂಲ ನಮ್ಮ ಬಳಿ ಇದೆ. ಅದಕ್ಕೆ ಯಾವುದೇ ರೀತಿಯಲ್ಲೂ ಹಣಕಾಸಿನ ತೊಂದೆರಯಾಗುವುದಿಲ್ಲ. ಅನುಮತಿ ಬೇಕಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೇಳೋದು ಒಂದು ಮಾಡೋದು ಮತ್ತೊಂದು

ಸರ್ವ ಪಕ್ಷ ಸಭೆ ಕರೆದಾಗ ಜಾ.ದಳ-ಬೆಜಿಪಿಯವರು ನೀವು ಮಾಡಿರುವುದು ಸರಿಯಾಗಿಯೇ ಇದೆ. ಅದನ್ನೇ ಮುಂದುವರಿಸಿ ಎಂದು ಹೇಳುತ್ತಾರೆ. ಹೊರಗೆ ಬಂದು ಮತ್ತೊಂದು ಮಾತನಾಡುತ್ತಾರೆ. ಚುನಾವಣಾ ರಾಜಕೀಯ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಸಂಕಷ್ಟ ಪರಿಸ್ಥಿತಿಯನ್ನು ಕೇಂದ್ರದ ಗಮನ ಸೆಳೆಯಲು ಸರ್ವ ಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ದು ಭೇಟಿಗೆ ಸಮಯ ಕೇಳಿದ್ದೆವು. ಆದರೆ, ಅವರು ನೀಡಲಿಲ್ಲ. ಕೇಂದ್ರ ಸರ್ಕಾರ ಕನಿಷ್ಠ ನಮ್ಮ ಅಹವಾಲನ್ನು ಕೇಳುವುದಕ್ಕಾದರೂ ಅವಕಾಶ ನೀಡಲಿಲ್ಲ. ಹೀಗಿರುವಾಗ ನಾವು ಏನು ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಮುಂದುವರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಭೇಟಿಗೆ ಅವಕಾಶ ನೀಡಲಿಲ್ಲ

ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕಂದಾಯ, ಸಹಕಾರ, ಕೃಷಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಸಚಿವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಪರಿಹಾರ ಕೇಳಲು ಹೋದರೂ ಪ್ರಧಾನಿಗಳು ನಮಗೆ ಭೇಟಿಗೆ ಅವಕಾಶವನ್ನೇ ನೀಡಲಿಲ್ಲ. ನಾವು ಕೊಟ್ಟ ಮನವಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಮೂರು ತಂಡಗಳನ್ನು ರಾಜ್ಯಕ್ಕೆ ಕಳುಹಿಸಿದೆ. ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ತಂಡಗಳು ಸೋಮವಾರ ವಾಪಸ್ಸು ತೆರಳುತ್ತಾರೆ. ನಂತರ ವರದಿ ನೀಡಿದ ಬಳಿಕ ನಮಗೆ ಪರಿಹಾರ ಕೇಳಬಹುದು ಅಷ್ಟೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!