Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮೇಕೆದಾಟು ಅಣೆಕಟ್ಟೆ | ಮಂಡ್ಯ ಜಿಲ್ಲೆಯ 1079 ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆ

ಮೇಕೆದಾಟು ಯೋಜನೆ ಪ್ರಾರಂಭಿಸಲು ಮಂಡ್ಯ ಜಿಲ್ಲೆಯ 1079 ಹೆಕ್ಟೇರ್ ಪ್ರದೇಶದ ಬೇಕಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳವಳ್ಳಿ ತಾಲ್ಲೂಕಿನ 5 ಗ್ರಾಮಗಳಲ್ಲಿ 1079 ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ, ಅದಕ್ಕೆ ಬದಲಿಯಾಗಿ 1:2 ಅನುಪಾತದಲ್ಲಿ ಮಂಡ್ಯ ಜಿಲ್ಲೆಯ 2204 ಹೆಕ್ಟೇರ್ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ಜಾಗ ಗುರುತಿಸಲಾಗಿತ್ತು. ಈ ಹಿಂದೆ ಗುರುತಿಸಲಾದ 2204 ಹೆಕ್ಟೇರ್ ಜಾಗವನ್ನು ತೆಗೆದುಕೊಳ್ಳಲಾಗುತ್ತಿಲ್ಲ ಎಂದು ತಿಳಿಸಿದರು.

ಅರಣ್ಯ ಇಲಾಖೆಗೆ 1:1 ಅನುಪಾತದಲ್ಲಿ 1079 ಹೆಕ್ಟೇರ್ ಅರಣ್ಯೇತರ ಜಾಗ, ಗೋಮಾಳ, ಸರ್ಕಾರಿ ಜಾಗಗಳನ್ನು ನೀಡಬೇಕು. ಈಗಾಗಲೇ ಪಾಂಡವಪುರ ಮತ್ತು ನಾಗಮಂಗಲದಲ್ಲಿ 307 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದ್ದು ಅರಣ್ಯ ಇಲಾಖೆಯೂ ಸಹ ಸದರಿ ಜಾಗಕ್ಕೆ ಸೂಕ್ತತೆ ಪ್ರಮಾಣ ಪತ್ರ ನೀಡಿದೆ ಎಂದರು.

ಬಾಕಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ ಅರಣ್ಯ ಇಲಾಖೆಗೆ ನೀಡಬೇಕು. ಅಧಿಕಾರಿಗಳು ತಾಲ್ಲೂಕುವಾರು ತಂಡ ರಚಿಸಿ ಉಳಿದ 757 ಹೆಕ್ಟೇರ್ ಜಾಗವನ್ನು ಗುರುತಿಸಿ 15 ದಿನಗಳೊಳಗಾಗಿ ಸೂಕ್ತತೆ ಪ್ರಮಾಣ ಪಡೆಯಬೇಕು. ಉಪ ಮುಖ್ಯಮಂತ್ರಿಗಳು ಪ್ರತಿ 15 ದಿನಗಳಿಗೊಮ್ಮೆ ಮೇಕೆದಾಟು ಯೋಜನೆ ಕುರಿತು ಸಭೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಎ.ಸಿ.ಎಫ್. ಎ.ಡಿ.ಎಲ್.ಆರ್ ಮತ್ತು ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಸೂಕ್ತ ಪರ್ಯಾಯ ಜಾಗ ಗುರುತಿಸಬೇಕು. ಅರಣ್ಯೇತರ ಜಾಗವನ್ನು ಗುರುತಿಸುವಾಗ ಸದರಿ ಜಾಗದ ಕುರಿತು ಯಾವುದೇ ಅಕ್ರಮ ಸಕ್ರಮ ಇರಬಾರದು. ಅಧಿಕಾರಿಗಳು ಗುರುತಿಸಿರುವ ಜಾಗ ಸರ್ವೇ ಮತ್ತು ಸ್ಕೆಚ್ ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಕಾವೇರಿ ನೀರಾವರಿ ನಿಗಮದ ಅಭಿಯಂತರ ರಘುರಾಮನ್, ಅರಣ್ಯ ಇಲಾಖೆಯ ಡಿ.ಎಫ್.ಓ ರಘು ತಾಲ್ಲೂಕು ಮಟ್ಟದ ಅರಣ್ಯಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ