Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಿರು ಉದ್ಯಮ ಸ್ಥಾಪಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ

ಮಹಿಳೆಯರು ಸರ್ಕಾರ ನೀಡುವ 1 ಲಕ್ಷ ಸಹಾಯಧನವನ್ನು ಬಳಸಿಕೊಂಡು ಕಿರು ಉದ್ದಿಮೆ ಸ್ಥಾಪಿಸುವ ಮೂಲಕ ತಾವೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಎಂ.ಶ್ರೀನಿವಾಸ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಇವರ ವತಿಯಿಂದ ನಗರದ ಬಾಲಭವನದಲ್ಲಿ ನಡೆದ ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿಯಲ್ಲಿ ಒಂದು ಲಕ್ಷ ರೂ.ಗಳ ಚೆಕ್ ಅನ್ನು ಮಹಿಳಾ ಸ್ವಸಹಾಯ ಸಂಘಗಳಿಗೆ ವಿತರಿಸಿ ಅವರು ಮಾತನಾಡಿದರು.

ಎಲ್ಲರೂ ಹುಟ್ಟಿನಿಂದಲೇ ಎಲ್ಲವನ್ನೂ ಕಲಿತಿರುವುದಿಲ್ಲ‌. ಕೆಲವನ್ನು ನೋಡಿ ಕಲಿಯಬೇಕು. ಮತ್ತೆ ಕೆಲವನ್ನು ಮಾಡಿ ಕಲಿಯಬೇಕು. ಇನ್ನು ಕೆಲವನ್ನು ಓದಿ ಕಲಿಯಬೇಕು ಎಂಬ ಗಾದೆ ಮಾತಿನಂತೆ ಈ ಯೋಜನೆ ಮಾಡಿ ಕಲಿಯುವ ರೀತಿಯಲ್ಲಿದೆ ಎಂದ ಅವರು ,ಈ ಹಣವನ್ನು ಬಳಸಿಕೊಂಡು ಅಭಿವೃದ್ಧಿಯಾಗಿ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ರಾಜಮೂರ್ತಿ ಮಾತನಾಡಿ, ಮಹಿಳೆ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಯಿತು. ಅದರ ಮೂಲಕ ಆರ್ಥಿಕ ಚೇತರಿಕೆ ಕಾಣುವಂತಾಗಿದೆ ಎಂದರು.

ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಕಳೆದ ೨೦೦೦ ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ೧೦೦ ಕೋಟಿಗೂ ಹೆಚ್ಚು ಹಣ ಉಳಿತಾಯ ಮಾಡಿದ್ದಾರೆ. ಹೀಗಾಗಿ ಮತ್ತಷ್ಟು ಅಭಿವೃದ್ಧಿಗೆ ಒತ್ತು ನೀಡಲು ಸರ್ಕಾರ ಕಿರು ಉದ್ದಿಮೆ ಸ್ಥಾಪನೆಗೆ 1 ಲಕ್ಷ ನೀಡುತ್ತಿದೆ. ಪ್ರಾರಂಭದಲ್ಲಿ ಜಿಲ್ಲೆಗೆ 150 ಸಂಘಗಳಿಗೆ ಮಾತ್ರ ನೀಡಲು ಉದ್ದೇಶವಿತ್ತು. ಶಾಸಕರು, ಜನಪ್ರತಿನಿಧಿಗಳ ಒತ್ತಡದಿಂದಾಗಿ 350 ಸಂಘಗಳಿಗೆ ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಅದರಲ್ಲಿ ಮಂಡ್ಯ ತಾಲೂಕಿನಲ್ಲಿ 40 ಸಂಘಗಳಿಗೆ ನೀಡುತ್ತಿದ್ದೇವೆ ಎಂದರು.

ನಗರಸಭಾಧ್ಯಕ್ಷ ಎಚ್.ಎಸ್. ಮಂಜು ಮಾತನಾಡಿ, 10 ಸಾವಿರದಿಂದ ಲಕ್ಷಾಂತರ ರೂ.ಗಳನ್ನು ಹೂಡಿಕೆ ಮಾಡಿ ಉದ್ದಿಮೆ ಸ್ಥಾಪನೆಗೆ ಅವಕಾಶಗಳಿವೆ. ಸ್ವಸಹಾಯ ಸಂಘಗಳು ಯಾವ ಉದ್ದಿಮೆ ಸ್ಥಾಪಿಸಿದರೆ ಹೆಚ್ಚು ಲಾಭ ಬರುತ್ತದೆ. ಮತ್ತು ಅದರಿಂದ ಏನೇನು ಲಾಭಗಳಾಗುತ್ತೆ, ಸಮಾಜಕ್ಕೆ ಅದರಿಂದ ಏನು ಲಾಭ ಎಂಬದರ ಬಗ್ಗೆ ಚಿಂತನೆ ನಡೆಸಿ ಕಿರು ಉದ್ದಿಮೆಗಳನ್ನು ಸ್ಥಾಪಿಸಿ ಅದರಿಂದ ಲಾಭ ದ್ವಿಗುಣಗೊಳಿಸಿಕೊಳ್ಳುವಂತೆ ಕರೆ ನೀಡಿದರು.

ಇದೇ ವೇಳೆ ಅಮೃತ ಕಿರು ಉದ್ದಿಮೆ ಯೋಜನೆಯಲ್ಲಿ ತಾಲೂಕಿನ 51 ಸ್ವಸಹಾಯ ಸಂಘಗಳಿಗೆ ಚೆಕ್ ವಿತರಿಸಲಾಯಿತು.

ಸಿಪಿಡಿಒಗಳಾದ ನಂಜಮ್ಮಣ್ಣಿ, ಅಂಬಿಕಾ, ಮೇಲ್ವಿಚಾರಕರಾದ ಶಕುಂತಳಾ ಬಡಿಗೇರ್, ರೇಖಾ, ಚಂಪಾ, ನಗರಸಭಾ ಸದಸ್ಯೆ ಮಂಜುಳಾ ಉದಯಶಂಕರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!