Friday, September 20, 2024

ಪ್ರಾಯೋಗಿಕ ಆವೃತ್ತಿ

ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ವಿಧಿಸಿರುವ ಜಿಎಸ್ಟಿ ರದ್ದಿಗೆ ಆಗ್ರಹ

ಹಾಲು ಹಾಗೂ ಹಾಲಿನ ಉತ್ಪನ್ನಗಳು ಮತ್ತು ಹೈನುಗಾರಿಕೆ ಯಂತ್ರೋಪಕರಣಗಳ ಮೇಲೆ ಹಾಕಿರುವ ಜಿಎಸ್ ಟಿ ತೆರಿಗೆ ರದ್ದುಪಡಿಸಲು ಆಗ್ರಹಿಸಿ ಮದ್ದೂರು ತಾಲ್ಲೂಕು ಕಛೇರಿ ಎದುರು ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಧರಣಿ ನಡೆಸಿ ಪ್ರತಿಭಟಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ನರೇಂದ್ರ ಮೋದಿಯವರು ಈಗ ರೈತರ ಉತ್ಪನ್ನಗಳಿಗೆ ತೆರಿಗೆ ಹಾಕುವ ಮೂಲಕ ರೈತರ ಆರ್ಥಿಕ ನಷ್ಟವನ್ನು ದುಪ್ಪಟ್ಟು ಗೊಳಿಸುತ್ತಿದ್ದಾರೆ.

ಯಾವುದೇ ಕಾರಣಕ್ಕೂ ರೈತರ ಉತ್ಪನ್ನಗಳಿಗೆ ತೆರಿಗೆ ಹಾಕುವುದಿಲ್ಲ ಎಂದು ಸಂಸತ್ತಿನಲ್ಲಿ ನೀಡಿದ್ದ ಭರವಸೆಗೆ ವಿರುದ್ದವಾಗಿ ಜಿಎಸ್ ಟಿ ಹಾಕುವ ಮೂಲಕ ವಚನ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.

ಗೆಜ್ಜಲಗೆರೆ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ್ ರವರು ಮಾತನಾಡಿ, ಜಿಲ್ಲೆಯ ಜನರು ತಮ್ಮ ಜೀವನೋಪಾಯಕ್ಕೆ ಹೈನುಗಾರಿಕೆ ಅವಲಂಬಿಸಿದ್ದಾರೆ. ಈಗಾಗಲೇ ನಷ್ಟದಲ್ಲಿರುವ ಜಿಲ್ಲೆಯ ಹೈನುಗಾರಿಕೆ ಯನ್ನು ಜಿಎಸ್ ಟಿ ತೆರಿಗೆ ಹಾಕಿ ಸಂಪೂರ್ಣವಾಗಿ ಮುಳುಗಿಸಿ ಮನಮುಲ್ ಮುಚ್ಚುವಂತಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಕ್ಕದ ಕೇರಳದಲ್ಲಿ ಲೀಟರ್‌ ಹಾಲಿಗೆ ಅಲ್ಲಿನ ಸಹಕಾರ ಸಂಘಗಳು ರೈತರಿಗೆ 38 ರೂಪಾಯಿ ಪಾವತಿಸುತ್ತಿವೆ.ಇದಲ್ಲದೇ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಎರಡು ಹಸು ಅಥವಾ ಎರಡು ಎಮ್ಮೆ ಸಾಕಿರುವ ರೈತರಿಗೆ 200 ದಿನದ ಕೂಲಿ ಮೊತ್ತ ಪಾವತಿಸುತ್ತಿದ್ದಾರೆ. ರಾಜ್ಯದಲ್ಲಿ ಸಹಕಾರಿ ವಲಯವನ್ನು ನಾಶ ಮಾಡುವ ಕೆಲಸ ನಡೆಯುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಸಂಘಟಿಸಲಾಗುವುದು ಎಂದು ತಿಳಿಸಿದರು.

ಡಾ.ಸ್ವಾಮಿನಾಥನ್ ವರದಿ ಪ್ರಕಾರ ಲೀಟರ್‌ ಹಾಲಿಗೆ ಕನಿಷ್ಠ 50 ರೂಗಳನ್ನು ನೀಡಬೇಕು.ಹೈನುಗಾರಿಕೆ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಅಗತ್ಯ ಕ್ರಮ ವಹಿಸಬೇಕು. ಹೈನುಗಾರಿಕೆ ಗೆ ಮಾರಕವಾಗಿರುವ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ 20 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳು ಜಿಎಸ್ ಟಿ ತೆರಿಗೆ ರದ್ದುಪಡಿಸಲು ಆಗ್ರಹಿಸಿ ಸಂಗ್ರಹಿಸಿದ್ದ 1268 ಹೈನುಗಾರ ರೈತರ ಸಹಿಗಳನ್ನು ಒಳಗೊಂಡ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ಮೂಲಕ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ರಿಗೆ ಕಳುಹಿಸಲಾಯಿತು.

ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡರಾದ ಜವರೇಗೌಡ, ಟಿ ಆರ್ ಸಿದ್ದೇಗೌಡ ,ರಾಮಣ್ಣ,ಶಿವು, ಹೊನ್ನಯ್ಯ ,ಮಹದೇವಸ್ವಾಮಿ ,ಉಮೇಶ್ ,ರುದ್ರೇಶ್ ,ರಮೇಶ್ ,ಅರುಣ್ ಕುಮಾರ್ ,ರವಿಂದ್ರ ,ರಾಮಲಿಂಗೇಗೌಡ ಮುಂತಾದವರು ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!