Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಿಮ್ಸ್ ಸುಧಾರಣೆಗೆ ಹಲವು ಕ್ರಮ : ಶಾಸಕ ರವಿಕುಮಾರ್

ಮಂಡ್ಯ ಮೆಡಿಕಲ್ ಕಾಲೇಜು ಅಧೀನಕ್ಕೊಳಪಟ್ಟಿರುವ ಮಿಮ್ಸ್ ಜಿಲ್ಲಾಸ್ಪತ್ರೆಯ ವ್ಯವಸ್ಥೆಯನ್ನು ಸುಧಾರಣೆಗೊಳಿಸಲು ದಿಢೀರ್ ಭೇಟಿ ಮಾಡಿ, ಕಡ್ಡಾಯವಾಗಿ ಮಾಸಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ನೆಲ್ಲೂರು ಗ್ರಾಮದ ಸಾನ್ವಿ (7) ಎಂಬ ಬಾಲಿಕಿಗೆ ಟೈಲ್ಸ್‌ ಬಿದ್ದು ಪಾದದ ಮೂಳೆ ಮುರಿದಿತ್ತು. ಬಾಲಕಿಯ ಪೋಷಕರು ಗಾಯಾಳು ಸಾನ್ವಿಯನ್ನು ಮೇ 29 ರಂದು ಮಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೇ 31ರಂದು ಮೃತಳಾಗಿದ್ದಳು. ಈ ಸಂಬಂಧ ಮೃತಳ ಪೋಷಕರು ಹಾಗೂ ವಿವಿಧ ಸಂಘ ಸಂಸ್ಥೆಯ ಮುಖಂಡರು ಶವವಿಟ್ಟು ಪ್ರತಿಭಟನೆ ನಡೆಸಿದ್ದರು.

ಘಟನೆ ಸಂಬಂಧ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಶಾಸಕ ಪಿ.ರವಿಕುಮಾರ್ ಗೌಡ ನೇತೃತ್ವದಲ್ಲಿ ಮಿಮ್ಸ್ ಆವರಣದಲ್ಲಿಂದು ಸಭೆ ನಡೆಸಲಾಯಿತು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿರುವ ಸಂಶಯ ಸಾರ್ವಜನಿಕರಿಂದ ವ್ಯಕ್ತವಾಗಿದ್ದು, ಮೇಲ್ನೋಟಕ್ಕೆ ವಾಸ್ತವವೆಂದು ತಿಳಿದು ಬಂದಿದ್ದು, ತನಿಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು.

ತನಿಖಾ ಸಮಿತಿ ರಚನೆ

ಬಾಲಕಿ ಸಾವಿನ ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದೆ. ಮೈಸೂರು ವೈದ್ಯಕೀಯ ಕಾಲೇಜಿನ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಪ್ರದೀಪ್ ಅವರು ಅಧ್ಯಕ್ಷರಾಗಿ, ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದಲ್ಲಿರುವ ಮೂಳೆ ಮತ್ತು ಕೀಲು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್, ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಬಾಲಕೃಷ್ಣ, ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಚೇತನನಂದ ಅವರು ಸದಸ್ಯರಾಗಿ ಹಾಗೂ ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ‌ ಕಚೇರಿಯ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್ ಅವರು ಸದಸ್ಯ ಕಾರ್ಯದರ್ಶಿಗಳಾಗಿ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಘಟನೆ ಸಂಬಂಧ ಮಿಮ್ಸ್ ವೈದ್ಯರಿಂದ ಮಾಹಿತಿ ಕಲೆ ಹಾಕಲಾಗಿದ್ದು, ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರಬಹುದೆಂಬ ಹೇಳಿಕೆ ತೃಪ್ತಿಕರವಾಗಿಲ್ಲದ ಕಾರಣ ಸಮಗ್ರ ತನಿಖೆಗೆ ಸೂಚಿಸಲಾಗಿದೆ ಎಂದರು.

ಮಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಉಡಾಫೆ ವರ್ತನೆ ಬಗ್ಗೆ ಸಾರ್ವಜನಿಕ ದೂರುಗಳನ್ನು ಆಲಿಸಿ, ಆ ಬಗ್ಗೆಯೂ ಚರ್ಚಿಸಲಾಗಿದೆ. ಸ್ಥಾನಿಕ ವೈದ್ಯಾಧಿಕಾರಿ ಡಾ.ದರ್ಶನ್ ಅವರ ವರ್ತನೆ ಬಗ್ಗೆಯೂ ಚರ್ಚಿಸಿ ಎಚ್ಚರಿಕೆ ನೀಡಲಾಗಿದೆ.

ವಾಸ್ತವ್ಯಕ್ಕೆ ಸೂಚನೆ

ಮಿಮ್ಸ್ ಆಸ್ಪತ್ರೆಯ ಪ್ರಮುಖ ಹುದ್ದೆಯಲ್ಲಿರುವ ವೈದ್ಯಾಧಿಕಾರಿಗಳು ಮೈಸೂರಿನಲ್ಲಿ ವಾಸ್ತವ್ಯವಿರುವ ಬಗ್ಗೆ ಚರ್ಚಿಸಿ ಜಿಲ್ಲಾ ಕೇಂದ್ರದಲ್ಲೇ ವಾಸ್ತವ್ಯವಿರುವಂತೆ ಸೂಚಿಸಲಾಗಿದ್ದು, ಪ್ರತಿ ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ ಪರಿಶೀಲನೆಗೆ ನಿಗಾ ಸಮಿತಿ ರಚಿಸಲು ಸೂಚಿಸಲಾಗಿದೆ ಎಂದರು.

ಪರಿಹಾರಕ್ಕೆ ಪ್ರಯತ್ನ

ಮೃತ ಬಾಲಕಿಯ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಹಾಗೂ ಮಿಮ್ಸ್ ಆವರಣದಲ್ಲಿ ಸ್ವಚ್ಚತೆ ಕಾಯ್ದುಕೊಳ್ಳಲು ಅಗತ್ಯವಿರುವ ಡಸ್ಟ್ ಬಿನ್,ಬಕೆಟ್ ಸೇರಿದಂತೆ ಇನ್ನಿತರ ಪರಿಕರ ಖರೀದಿಗೆ ಅನುದಾನ ಬಿಡುಗಡೆ ಮತ್ತು ಸಿಎಸ್ಆರ್ ಅನುದಾನದಲ್ಲಿ ಅಗತ್ಯ ರಸ್ತೆ ನಿರ್ಮಾಣ ಮತ್ತು ಅಕ್ಕ ಕೆಫೆ ತೆರೆಯಲು ಚಿಂತನೆ ನಡೆಸಲಾಗಿದ್ದು, ಪಾರ್ಕಿಂಗ್ ವ್ಯವಸ್ಥೆಯ ಅವ್ಯವಸ್ಥೆ ಸರಿಪಡಿಸಲು ಸೂಚಿಸಲಾಗಿದ್ದು, ಇ- ರಶೀದಿ, ಸಿ.ಸಿ.ಟಿವಿ ಅಳವಡಿಕೆ ಸೇರಿದಂತೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಸೇರಿದಂತೆ ಆಸ್ಪತ್ರೆಯ ಪ್ರಮುಖ ವೈದ್ಯಾಧಿಕಾರಿಗಳ ಸಭೆ ನಡೆಸಿ, ಅವ್ಯವಸ್ಥೆಗಳ ಬಗ್ಗೆ ಬೇಸರ ಹೊರ ಹಾಕಿ, ಸುಧಾರಣೆ ಕೈಗೊಳ್ಳುವಂತೆ ತಾಕೀತು ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ