ಮಂಡ್ಯ ವೈದ್ಯಕೀಯ ಕಾಲೇಜು (ಮಿಮ್ಸ್) ವಿನ 18 ಎಕರೆ ಸ್ಥಳವನ್ನು ತಮಿಳು ಕಾಲೋನಿ ನಿವಾಸಿಗಳು ಸೇರಿದಂತೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸಿ ಮಿಮ್ಸ್ ಅಭಿವೃದ್ಧಿಗೆ ಸಹಕರಿಸಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಹೆಚ್.ಶಿವರಾಮೇಗೌಡ ಬಣ)ಯ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಮ ಎಚ್ಚರಿಕೆ ನೀಡಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳು ಕಾಲೋನಿ ಜನರಿಗಾಗಿ ನಿರ್ಮಿಸಿದ ಮನೆಗಳ ವಿತರಣೆ ಸಂಬಂಧ ಜೂನ್ 3ರಂದು ಬೆಂಗಳೂರಿನಲ್ಲಿ ನಡೆದ ಮಂಡ್ಯ ನಗರದ ಕೊಳಗೇರಿಗಳ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಮಿಮ್ಸ್ ಹಾಗೂ ಮಂಡ್ಯ ಜಿಲ್ಲೆಯ ಹಿತಾಸಕ್ತಿಗೆ ವಿರುದ್ಧವಾದುದು ಎಂದರು.
ಮಂಡ್ಯ ಜಿಲ್ಲಾಸ್ಪತ್ರೆ (ಮಿಮ್ಸ್ ಕಾಲೇಜು) ಸ್ಥಳದಲ್ಲಿರುವ ತಮಿಳು ಕಾಲೋನಿ ನಿವಾಸಿಗಳಿಗೆ ಮಂಡ್ಯ ಕೆರೆಯಂಗಳದಲ್ಲಿ ನಿರ್ಮಿಸಿರುವ ಮನೆಗಳನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅನ್ಯರಿಗೆ ವಿತರಿಸುವ ಮಾತನ್ನಾಡಿದ್ದು, ತಮಿಳು ಕಾಲೋನಿ ನಿವಾಸಿಗಳಿಗೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ತಮಿಳು ಕಾಲೋನಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ, ಸ್ಥಳಾಂತರಿಸುವಂತೆ ಹೈಕೋರ್ಟ್ ಆದೇಶದ ಹಿನ್ನಲೆ ೨೦೧೮ರ ಜಿಲ್ಲಾಧಿಕಾರಿ ಮಂಜುಶ್ರೀ ರಾಜೀವ್ ಆವಾಸ್ ಯೋಜನೆಯಡಿ ೩೮ ಕೋಟಿ ವ್ಯಯಿಸಿ ೫೭೬ ಮನೆ ನಿರ್ಮಿಸಿದ್ದು, ತಮಿಳು ಕಾಲೋನಿ ನಿವಾಸಿಗಳು ತಮ್ಮ ಮನೆಗಳನ್ನು ಪಡೆಯಬೇಕು ಮತ್ತು ಸಚಿವರು, ಮಂಡ್ಯ ಶಾಸಕರು ಇದಕ್ಕೆ ಕ್ರಮವಹಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ತಮಿಳು ಕಾಲೋನಿಯ ಜನರನ್ನು ಅಲ್ಲಿಯೇ ಉಳಿಸಿ ತಮ್ಮ ಓಟ್ ಬ್ಯಾಂಕ್ ರಾಜಕೀಯ ಮಾಡಲು ಹೊರಟಿದ್ದಾರೆ. ಮಿಮ್ಸ್‌ನ ಸ್ಥಳದಲ್ಲಿ ತಮಿಳು ಕಾಲೋನಿ ನಿವಾಸಿಗಳು ಉಳಿಯುವಂತೆ ಮಾಡಲು ಹಾಗೂ ಅವರ ಓಲೈಕೆಗಾಗಿ ಜನಪ್ರತಿನಿಧಿಗಳು ಟೊಂಕಕಟ್ಟಿ ನಿಂತಿದ್ದು ಅವರಿಗಾಗಿ ನಿರ್ಮಿಸಿದ ಮನೆಗಳನ್ನು ಇತರರಿಗೆ ವಿತರಿಸುವ ಕ್ರಮ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಲ್ಕು ಬಾರಿ ತಮಿಳು ಕಾಲೋನಿ ನಿವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟರೂ ಅವರು ಸ್ಥಳಾಂತರಗೊಳ್ಳದೆ ಜಿಲ್ಲೆಯ ಅಭಿವೃದ್ಧಿಗೆ ಸವಾಲು ಎಸಗುತ್ತಿದ್ದು, ಮಿಮ್ಸ್ ಅಭಿವೃದ್ಧಿಗೆ ಸರ್ಕಾರ ಅಗತ್ಯ ತೀರ್ಮಾನ ಕೈಗೊಂಡು ತಮಿಳು ಕಾಲೋನಿ ನಿವಾಸಿಗಳು ಸ್ಥಳಾಂತರಗೊಳಿಸುವಂತೆ ಮನವಿ ಮಾಡಿದರು.




