Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಮಿಮ್ಸ್ | ಹೊರಗುತ್ತಿಗೆ ಹೆಸರಿನಲ್ಲಿ ಕೋಟ್ಯಾಂತರ ರೂ. ಲೂಟಿ : ನಾಗಣ್ಣಗೌಡ


  • ನಕಲಿ ಪ್ರಮಾಣಪತ್ರವನ್ನು ನಿಯಮಬಾಹಿರವಾಗಿ ಅಂಗೀಕರಿಸಿದ ಮಿಮ್ಸ್ ನಿರ್ದೇಶಕ ಬಿ.ಜೆ ಮಹೇಂದ್ರ ಹಾಗೂ ಆಡಳಿತಾಧಿಕಾರಿ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

  • ರೋಗ ಪರೀಕ್ಷೆ ಪ್ರಕ್ರಿಯೆಯನ್ನು ಖಾಸಗಿ ಏಜೆನ್ಸಿಗೆ ಹೊರಗುತ್ತಿಗೆ ನೀಡಿ, ಮಾಸಿಕ ₹59 ಲಕ್ಷದಂತೆ ವಾರ್ಷಿಕ ಏಳು ಕೋಟಿ ಖಾಸಗಿ ಕಂಪನಿಯ ಪಾಲು
  • ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಕೊಳ್ಳೆ

ಮಾನವ ಸಂಪನ್ಮೂಲ ಹಾಗೂ ವಿವಿಧ ಸೇವೆಗಳ ಹೆಸರಿನಲ್ಲಿ ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ಮು ಲೂಟಿ ಹೊಡೆಯಲಾಗುತ್ತಿದೆ, ಇದಕ್ಕಾಗಿ ನಿಯಮಬಾಹಿರ ಮಾರ್ಗಗಳನ್ನು ಅನುಸರಿಸಲಾಗು ತ್ತಿದೆ, ಇದರಲ್ಲಿ ಮಿಮ್ಸ್ ನಿರ್ದೇಶಕರು ಗುತ್ತಿಗೆ ಏಜೆನ್ಸಿಗಳು ಶಾಮೀಲಾಗಿವೆ ಎಂದು ಕರುನಾಡು ಸೇವಕರು ಸಂಘಟನೆಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಗಂಭೀರ ಆರೋಪ ಮಾಡಿದರು.

ಆಮಿಷಕ್ಕೆ ಒಳಗಾಗಿ ಕೆಎಸ್’ಎಫ್ -9 ಗೆ ಹೊರಗುತ್ತಿಗೆ 

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಮೆಡಿಕಲ್ ಕಾಲೇಜಿಗೆ ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸೇವೆ ಟೆಂಡರ್ ಪಡೆದ ಪ್ರಭಾವಿ ರಾಜಕಾರಿಣಿಯೊಬ್ಬರಿಗೆ ಸೇರಿದ ಕೆಎಸ್’ಎಫ್ -9 ಎಂಬ ಏಜೆನ್ಸಿಯ ದಾಖಲೆಗಳು ಕ್ರಮಬದ್ದವಾಗಿಲ್ಲದಿರುವ ಬಗ್ಗೆ ಅವಧಿ ಪೂರ್ವದಲ್ಲಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು. ಇದು ನಿರ್ದೇಶಕರಿಗೆ ತಿಳಿದಿದ್ದರೂ ಅಮಿಷಕ್ಕೆ ಒಳಗಾಗಿ ಅದೇ ಏಜೆನ್ಸಿಗೆ ಭದ್ರತಾ ಸೇವೆ ಹೊರಗುತ್ತಿಗೆ ನೀಡಲಾಯಿತು. ನಂತರದಲ್ಲಿ ನಮ್ಮ ಸಂಘಟನೆಯ ಆಗ್ರಹಕ್ಕೆ ಮಣಿದ ಚೆಸ್ಕಾಂ, ಈ ಏಜೆನ್ಸಿಗೆ ನೀಡಿದ್ದ ಸೇವಾ ಪ್ರಮಾಣಪತ್ರವನ್ನು ಹಿಂಪಡೆದು ಈ ಏಜೆನ್ಸಿಯು ಟೆಂಡರ್ ಪ್ರಕ್ರಿಯೆಯಲ್ಲಿ ಸಲ್ಲಿಸಿದ್ದ ಸೇವಾ ಪ್ರಮಾಣ ಪತ್ರ ನಕಲಿ ಎಂದು ರುಜುವಾಗಿದೆ. ಈ ಮೂಲಕ ನಮ್ಮ ಹೋರಾಟಕ್ಕೆ ಜಯವಾಗಿದೆ ಎಂದು ಹೇಳಿದರು.

ಈ ನಕಲಿ ಪ್ರಮಾಣಪತ್ರವನ್ನು ನಿಯಮಬಾಹಿರವಾಗಿ ಅಂಗೀಕರಿಸಿದ ಮಿಮ್ಸ್ ನಿರ್ದೇಶಕ ಬಿ.ಜೆ ಮಹೇಂದ್ರ ಹಾಗೂ ಆಡಳಿತಾಧಿಕಾರಿ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ ಏಜೆನ್ಸಿಯ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.

ಟೆಂಡರ್ ನೀಡಿ ಅಕ್ರಮ

ಈ ಹಿಂದೆ ರೌಡಿಗಳೊಂದಿಗೆ ಸೇರಿ ನನಗೆ ಜೀವ ಬೆದರಿಕೆ ಒಡ್ಡಿದ್ದ ಮಿಮ್ಸ್ ನಲ್ಲಿ ಸಿ ಮತ್ತು ಡಿ ದರ್ಜೆ ಹೊರಗುತ್ತಿಗೆ ನೌಕರರನ್ನು ಪೂರೈಸುವ ಆರ್. ಅಂಡ್ ಆರ್. ಮ್ಯಾನ್ ಪವರ್ ಏಜೆನ್ಸಿಯ ದಾಖಲೆಗಳು ನಕಲಿ ಎಂದು ದಾಖಲೆಗಳ ಸಮೇತ ದೂರು ನೀಡಲಾಗಿತ್ತು. ಆದರೆ ದೂರನ್ನು ನಿರ್ಲಕ್ಷಿಸಿ ಏಜೆನ್ಸಿಯ ಅಮಿಷಕ್ಕೆ ಒಳಗಾಗಿ ಅಂದಿನ ನಿರ್ದೇಶಕ ಡಾ.ಹರೀಶ್ ಹಾಗೂ ಅಂದಿನ ಆಡಳಿತಾಧಿಕಾರಿ ವೆಂಕಟಲಕ್ಷ್ಮೀ ಅದೇ ಏಜೆನ್ಸಿಗೆ ಟೆಂಡರ್ ನೀಡಿ ಅಕ್ರಮ ಎಸಗಿದ್ದರು. ನಂತರ ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದನ್ನು ಹಿಂಪಡೆಯುವಂತೆ ಏಜೆನ್ಸಿಯೂ ರೌಡಿಗಳೊಂದಿಗೆ ಬೆದರಿಕೆ ಹಾಕಿತ್ತು. ಇದರಲ್ಲಿ ಈ ಅಧಿಕಾರಿಗಳ ಕುಮ್ಮಕ್ಕು ಸಹ ಇತ್ತು. ಈಗ ಮಾಹಿತಿ ಹಕ್ಕು ಕಾಯ್ದೆಯಡಿ ಸತಾಯಿಸಿ ನೀಡಿರುವ ದಾಖಲೆಯಲ್ಲಿ ಈ ಏಜೆನ್ಸಿಯೂ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಾನುಸಾರ ದಾಖಲೆಗಳನ್ನು ಸಲ್ಲಿಸಿಲ್ಲವೆಂದು ಮನಗಂಡು ದಾಖಲೆಗಳು ಲಭ್ಯವಿಲ್ಲವೆಂದು ಹಿಂಬರಹ ನೀಡಿದೆ. ಮಿಮ್ಸ್ ಆಡಳಿತ ಮಂಡಳಿ ಟೆಂಡರ್ ಅರ್ಹತಾ ಮಾನದಂಡಗಳ ಪ್ರಕಾರ ಆ ಏಜೆನ್ಸಿಯು ದಾಖಲೆ ಸಲ್ಲಿಸಿಲ್ಲ ಎಂಬುದನ್ನು ಮಿಮ್ಸ್ ಒಪ್ಪಿಕೊಂಡಂತಾಗಿದೆ ಎಂದು ವಿವರಿಸಿದರು.

ಅಲ್ಲದೇ ಆಯುಷ್ಮಾನ್ ಭಾರತ್ ಯೋಜನೆಯ ನಿರ್ವಹಣೆಯ ಹೊಣೆಯನ್ನು ಮಿಮ್ಸ್ ವತಿಯಿಂದಲೇ ಈವರೆಗೆ ನಿರ್ವಹಿಸಲಾಗುತಿತ್ತು. ಈಗ ಖಾಸಗಿ ಟೈಪ್ ವೆಲ್ ಎಂಬ ಏಜೆನ್ಸಿಗೆ ಕೇವಲ ಕೋಟೆಷನ್ ಆಧಾರದಲ್ಲಿ ನಿರ್ವಹಣೆಗೆ ನೀಡಲಾಗಿದೆ. ನಿಯಮಾನುಸಾರ ಒಂದು ಲಕ್ಷ ರೂಪಾಯಿ ಒಳಗಿನ ಯೋಜನೆಗಳನ್ನು ಮಾತ್ರ ಕೋಟೆಷನ್ ಮೂಲಕ ನೀಡಲು ಅವಕಾಶವಿದೆ. ಆದರೆ ಇಲ್ಲಿ ತಿಂಗಳೊಂದಕ್ಕೆ ಒಂದು ಮುಕ್ಕಾಲು ಲಕ್ಷ ರೂಪಾಯಿಯನ್ನು ಖಾಸಗಿ ಏಜೆನ್ಸಿಗೆ ನೀಡಲಾಗುತ್ತಿದೆ. ಈವರೆಗೆ ಮಿಮ್ಸ್ ವತಿಯಿಂದ ನಿರ್ವಹಣೆಯಾಗುತ್ತಿದ್ದ ಈ ಯೋಜನೆಯನ್ನು ಖಾಸಗಿ ನಿರ್ವಹಣೆಗೆ ನೀಡಿ ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ದೂರಿದರು.

ಏಳು ಕೋಟಿ ಖಾಸಗಿ ಕಂಪನಿಯ ಪಾಲು

ಆಸ್ಪತ್ರೆಯ ಕೇಂದ್ರ ಪ್ರಯೋಗಾಲಯದಲ್ಲಿ ವಿವಿಧ ರೋಗ ಪರೀಕ್ಷೆಗಳನ್ನು ಮಿಮ್ಸ್ ವತಿಯಿಂದ ಅಗತ್ಯ ಸಿಬ್ಬಂದಿ ನೇಮಿಸಿಕೊಂಡು ನಿರ್ವಹಿಸಲಾಗುತಿತ್ತು. ಇದಕ್ಕೆ ಅವಶ್ಯವಿರುವ ರಾಸಯನಿಕಗಳನ್ನು (reagent) ಮಾತ್ರ ಹೊರಗಿನಿಂದ ಖರೀದಿ ಮಾಡಲಾಗುತಿತ್ತು. ಈಗ ಇಡೀ ರೋಗ ಪರೀಕ್ಷೆ ಪ್ರಕ್ರಿಯೆಯನ್ನು ಖಾಸಗಿ ಏಜೆನ್ಸಿಗೆ ಹೊರಗುತ್ತಿಗೆ ನೀಡಿ, ಮಾಸಿಕ ₹59 ಲಕ್ಷದಂತೆ ವಾರ್ಷಿಕ ಏಳು ಕೋಟಿ ಖಾಸಗಿ ಕಂಪನಿಯ ಪಾಲು ಮಾಡಲಾಗಿದೆ.ಈ ಹಿಂದೆ ಮಿಮ್ಸ್ ವತಿಯಿಂದ ರೋಗ ಪರೀಕ್ಷೆ ಪ್ರಕ್ರಿಯೆಗೆ ವಾರ್ಷಿಕವಾಗಿ ಎರೆಡುವರೆ ಕೋಟಿ ಸಾಕಾಗುತಿತ್ತು ಈಗ ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಿ ಹಳೇಯ ದರದ ಮೂರು ಪಟ್ಟು ಹಣವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಆಸ್ಪತ್ರೆಯನ್ನು ಖಾಸಗೀಕರಣಗೊಳಿಸುವ ಹುನ್ನಾರ 

ಈ ರೀತಿಯಲ್ಲಿ ಹೆಸರಿಗಷ್ಟೇ ಸರಕಾರಿ ಆಸ್ಪತ್ರೆ ಎಂದು ಹೇಳಿ ಇಡೀ ಕಾಲೇಜು ಆಸ್ಪತ್ರೆಯನ್ನು ಖಾಸಗಿಯವರ ವಶಕ್ಕೆ ನೀಡಲಾಗುತ್ತಿದೆ. ಈಗ ಬಳಕೆಯಾಗುತ್ತಿರುವ ಅರ್ಧದಷ್ಡು ಹಣದಲ್ಲಿ ಆಸ್ಪತ್ರೆ ನಿರ್ವಹಣೆ ಮಾಡಬಹುದಾದರೂ ಸಾರ್ವಜನಿಕ ಹಣ ದೋಚುವ ಸಲುವಾಗಿ ಈ ರೀತಿಯ ಕುತಂತ್ರಗಳನ್ನು ರೂಪಿಸಲಾಗಿದೆ. ಇದರ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ದನಿ ಎತ್ತಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ವಕೀಲ ಜೆ.ರಾಮಯ್ಗ, ಕಬ್ಬು ಬೆಳೆಗಾರರ ಸಂಘದ ಆಧ್ಯಕ್ಷ ವೇಣುಗೋಪಾಲ್,  ಕರುನಾಡ ಸೇವಕರ ಸಂಘಟನೆಯ ಚನ್ನಕೇಶವ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!