Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮಳೆಹಾನಿ ಪ್ರದೇಶಗಳಿಗೆ ಸಚಿವ ನಾರಾಯಣಗೌಡ ಭೇಟಿ

ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಸುರಿದ ಭಾರೀ ಬಿರುಗಾಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ನಾರಾಯಣಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಬೂಕನಕೆರೆ ಹೋಬಳಿಯ ಗಂಜಿಗೆರೆ, ಪೂವನಹಳ್ಳಿ, ಬೂಕಹಳ್ಳಿ ಕೊಪ್ಪಲು, ವಿಠಲಾಪುರ, ಅರಳುಕುಪ್ಪೆ ಸೇರಿದಂತೆ ತಾಲ್ಲೂಕಿನ ಹಲವೆಡೆ ಮನೆಗಳು ಹಾನಿಗೊಳಗಾಗಿದ್ದು, ತೆಂಗಿನ ಮರಗಳು ಧರೆಗುರುಳಿವೆ. ಪೂವನಹಳ್ಳಿಯಲ್ಲಿ ಏಳೆಂಟು ಹೆಂಚಿನ ಮನೆಗಳು ಹಾನಿಗೊಳಗಾಗಿದ್ದವು.

ಈ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ನಾರಾಯಣಗೌಡ ಜನರಿಂದ ಹಾನಿಯ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು. ಹಾನಿಗೊಳಗಾದವರಿಗೆ ವೈಯುಕ್ತಿಕವಾಗಿ ಪರಿಹಾರ ನೀಡಿದ ಸಚಿವರು, ಶೀಘ್ರದಲ್ಲೇ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ಪೂವನಹಳ್ಳಿಯಲ್ಲಿ ಹೆಂಚು ಬಿದ್ದು ಗಾಯಗೊಂಡಿದ್ದ ರೈತ ಬರ್ಮರ ನಾಯಕ ಅವರಿಗೆ ಸಚಿವ ನಾರಾಯಣಗೌಡ ಅವರು 5 ಸಾವಿರ ರೂಪಾಯಿ ಪರಿಹಾರ ನೀಡಿದರು. ಲತಾ ಸಿದ್ದಯ್ಯ ಎಂಬುವರ ಮನೆ ಹಾನಿಗೊಳಗಾಗಿದ್ದು, ಸಚಿವರು 95 ಸಾವಿರ ರೂಪಾಯಿ ಪರಿಹಾರ ವಿತರಿಸಿದರು. ಗೌರಮ್ಮ, ಬುಕ್ಕೇಗೌಡ ಸೇರಿದಂತೆ ಹಲವರ ಮನೆಗಳಿಗೆ ಭೇಟಿ ನೀಡಿ ಪರಿಹಾರ ನೀಡಿದರು.

ವಿಠಲಾಪುರದಲ್ಲಿ ನಾಗರಾಜಗೌಡ ಎಂಬುವರ ಹಸು ಸಿಡಿಲಿಗೆ ಸಾವನ್ನಪಿದ್ದು, ಅಲ್ಲಿಗೆ ತೆರಳಿದ ಸಚಿವರು 30 ಸಾವಿರ ಪರಿಹಾರ ವಿತರಿಸಿದರು.

ಇದೇ ವೇಳೆ ಬೂಕನಕೆರೆ ಹಾಗೂ ಶೀಳನೆರೆ ಏತ ನೀರಾವರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ನಾರಾಯಣಗೌಡ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು. 265 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!