Thursday, September 19, 2024

ಪ್ರಾಯೋಗಿಕ ಆವೃತ್ತಿ

ಅನ್ನದಾನಿ ಹಾಡು ಹೇಳುವುದನ್ನು ಬಿಟ್ಟು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ: ಸಿ.ಡಿ.ಗಂಗಾಧರ್

ಮಾಜಿ ಶಾಸಕ ಎನ್ನುವುದನ್ನು ಮರೆತು ಅನ್ನದಾನಿಯವರು ಬಾಯಿಗೆ ಬಂದಂತೆ ಮಾತನಾಡಿರುವುದು ಸರಿಯಲ್ಲ, ‘ನಾನು ಸೋತರೇ ಹಾಡುಗಳನ್ನು ಹಾಡಿ ಜೀವನ ಮಾಡುತ್ತೇನೆಂದು ಹೇಳಿದ್ದ ಅನ್ನದಾನಿ ಹಾಡು ಹೇಳುವುದನ್ನು ಬಿಟ್ಟು, ಜನರನ್ನು ದಾರಿ ತಪ್ಪಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ವ್ಯಂಗ್ಯವಾಡಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಯವರ ಸಹಾಯ ಪಡೆದ ಪಿ.ಎಂ ನರೇಂದ್ರಸ್ವಾಮಿ ಅವರು ಶಾಸಕ ಸ್ಥಾನವನ್ನು ಮತ್ತೆ ಪಡೆದಿದ್ದಾರೆಂಬ ಅನ್ನದಾನಿ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಪಕ್ಷೇತರವಾಗಿ ಗೆಲುವು ಪಡೆದಿದ್ದ ಪಿ.ಎಂ ನರೇಂದ್ರಸ್ವಾಮಿ ಅವರು ಸಚಿವ ಸ್ಥಾನ ಕಳೆದುಕೊಳ್ಳುವುದರ ಜೊತೆಗೆ ಶಾಸಕ ಸ್ಥಾನದ ಅನರ್ಹತೆಯನ್ನು ಅನುಭವಿಸಿ ನ್ಯಾಯಾಂಗದ ಹೋರಾಟದಲ್ಲಿ ಗೆದ್ದು ಮತ್ತೆ ಶಾಸಕ ಸ್ಥಾನ ಪಡೆಯುವಂತಾಯಿತು, ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು ಜಾತಿ ಹೆಸರಿನಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ, ಅನಿವಾರ್ಯತೆಯೂ ಬಂದಿಲ್ಲ, ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಕ್ಷೇತ್ರಕ್ಕೆ ತಂದು ಸಮಗ್ರವಾಗಿ ಅಭಿವೃದ್ದಿ ಪಡಿಸುತ್ತಿದ್ದಾರೆ, ಅಭಿವೃದ್ದಿಯ ವಿಷಯದಲ್ಲಿ ಸವಾಲಿಗೆ ಸಿದ್ದ ಎಂದು ಹೇಳಿದರು.

ಕೋಮುವಾದಿ ಪಕ್ಷ ಬಿಜೆಪಿ ಪಕ್ಷದ ಜೊತೆ ಮೈತ್ರಿ

ಜಾತ್ಯಾತೀತ ಪಕ್ಷ ಎಂದು ಹೇಳುವ ಜೆಡಿಎಸ್ ಪಕ್ಷದವರು ಕೋಮುವಾದಿ ಪಕ್ಷ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ, ಮಳವಳ್ಳಿ ತಾಲ್ಲೂಕಿನಲ್ಲಿ ಜಾತಿಯ ಹೆಸರಿನಲ್ಲಿ ಪ್ರತಿಭಟನೆ ಮಾಡಿ ರಾಜಕಾರಣ ಮಾಡುವ ನಡೆಯನ್ನು ಖಂಡಿಸುತ್ತೇವೆ, ರಾಜ್ಯಪಾಲರು ಶಾಸಕ ಸ್ಥಾನವನ್ನು ಅನರ್ಹಗೊಳಿಸುವಂತೆ ಮಾಜಿ ಶಾಸಕ ಅನ್ನದಾನಿ ಒತ್ತಾಯಿಸಿದ್ದಾರೆ, ಶಾಸಕ ಸ್ಥಾನವನ್ನು ಯಾರು ವಜಾ ಮಾಡಬಹುದು ಎನ್ನುವ ಸಣ್ಣ ತಿಳುವಳಿಕೆಯೂ ಇಲ್ಲದವರನ್ನು ಎರಡು ಭಾರಿ ಶಾಸಕರನ್ನಾಗಿ ಮಾಡಿರುವುದು ದೌರ್ಭಾಗ್ಯ ಎಂದರು.

ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಮಾನಸಿಕವಾಗಿ ಮಾಜಿ ಶಾಸಕರು ಅನ್ನದಾನಿ ದೂರವಿಟ್ಟಿದ್ದಾರೆ,ತ ಮ್ಮ ನಾಯಕತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ, ಇನ್ನೂ ಮುಂದಾದರೂ ರಚನಾತ್ಮಕ ಕಾರ್ಯಕ್ರಮಗಳು ಹಾಗೂ ಹೋರಾಟಗಳನ್ನು ಮಾಡುವುದರ ಮೂಲಕ ಸರ್ಕಾರದ ಅಭಿವೃದ್ದಿಗೆ ಕೈ ಜೋಡಿಸಬೇಕೆಂದು ತಿಳಿಸಿದರು.

ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಭೂಮಿ ಪರಭಾರೆ

ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ಕ್ಷೇತ್ರದ ಅಭಿವೃದ್ದಿಯ ಸಾಕ್ಷಿಗುಡ್ಡೆ ಅನ್ನದಾನಿ ಅವರದು ಏನು ಇಲ್ಲ, ಅವರ ಅಧಿಕಾರದ ಅವಧಿಯಲ್ಲಿ ಎರಡೂವರೆ ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವುದು ಅವರ ಸಾಧನೆಯಾಗಿದೆ ಎಂದು ಛೇಡಿಸಿದರು.

ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ವಿಶ್ವಾಸ್ ಮಾತನಾಡಿ, ಕೆ.ಆರ್‌ಎಸ್‌ನಿಂದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಬಿಡಲಾಗುತ್ತಿದೆ, ಆದರೇ ಮಂಡ್ಯ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ನೀರಿನ ಅಭಾವ ಉಂಟಾಗಿದೆ, ಮೇಲ್ಬಾಗದಿಂದ ಹಂತ ಹಂತವಾಗಿ ನೀರನ್ನು ಕೊಡಲಾಗುತ್ತಿದೆ, ಪ್ರತಿವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಾಟಿ ಮಾಡಲಾಗುತ್ತದೆ, ಇಂತಹ ಕನಿಷ್ಟಜ್ಞಾನವು ಇಲ್ಲದ ಮಾಜಿ ಶಾಸಕರು ಹೋರಾಟ ಮಾಡುತ್ತೇವೆಂದು ಹೇಳುವುದು ಹಾಸ್ಯಾಸ್ಪದ ಎಂದರು.

ಅಕ್ಷಮ್ಯ ಅಪರಾಧ

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ರಾಜ್ಯಪಾಲರನ್ನು ಜಾತಿಯ ಹೆಸರಿನಲ್ಲಿ ಗುರುತಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಜಾತಿಯ ಹೆಸರು ಬಳಸಿರುವ ಕೆಲ ವಿರೋಧ ಪಕ್ಷದ ನಾಯಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪಿ.ಎಂ ನರೇಂದ್ರಸ್ವಾಮಿ ಅವರು ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮೇಲೆ ತಾಲ್ಲೂಕಿನಾದ್ಯಂತ ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ, ಶಾಸಕರ ವಿರುದ್ದ ಉದ್ದೇಶ ಪೂರ್ವಕವಾಗಿ ಪ್ರತಿಭಟನೆ ಮಾಡಿದರೇ ಕಾಂಗ್ರೆಸ್ ಪಕ್ಷದವರಿಂದಲೂ ತಕ್ಕ ಉತ್ತರವನ್ನು ನೀಡಲಿದ್ದೇವೆಂದು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು ಮಾತನಾಡಿ, ಮಾಜಿ ಶಾಸಕ ಅನ್ನದಾನಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕಾಮಗಾರಿಯೊಂದಕ್ಕೆ ಸಾರ್ವಜನಿಕವಾಗಿ ಒಂದು ಲಕ್ಷ ರೂ ಲಂಚ ಸ್ವೀಕರಿಸುತ್ತಿರುವುದು ಬಹಿರಂಗವಾಗಿಯೇ ಪ್ರಚಾರಗೊಂಡಿದೆ, ಶಾಸಕ ಸ್ಥಾನಕ್ಕೂ ಗೌರವ ನೀಡದೇ ಇಷ್ಟಬಂದಂತೆ ಚಿತ್ರ ಬರೆದು ಕ್ರೌರ್ಯ ಮೆರೆದಿರುವುದು ನಿಮ್ಮ ನಡವಳಿಕೆಗೆ ಸಾಕ್ಷಿಯಾಗಿದೆ, ಇದೇ ರೀತಿ ಮುಂದುವರೆದರೇ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಗೋಷ್ಠಿಯಲ್ಲಿ ದೇವರಾಜು, ಶಿವಮಾದೇಗೌಡ, ರಾಮಚಂದ್ರಯ್ಯ, ಪ್ರಕಾಶ್, ಪ್ರಮೀಳ, ರಾಜಶೇಖರ್, ಬಸವೇಶ್, ಲಿಂಗರಾಜು, ಶಶಿಕುಮಾರ್, ಕುಳ್ಳಚನ್ನಂಕಯ್ಯ, ಪುಟ್ಟಸ್ವಾಮಿ, ಕೃಷ್ಣಮೂರ್ತಿ, ವೇದಮೂರ್ತಿ, ಶಾಂತರಾಜು, ಬಸವರಾಜು, ರವೀಂದ್ರ ಹಾಗೂ ಅದಿಲ್‌ಪಾಷ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!