ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಎಂಬ ಕಾರಣಕ್ಕೆ ವಾರ್ಡನ್ ವಿರುದ್ಧ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೆಂಡ ಕಾರಿದ ಪ್ರಸಂಗ ಕಳೆದ ರಾತ್ರಿ ನಡೆದಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ಅರುಣ್ ಕುಮಾರ್ ವಸತಿ ಶಾಲೆಗೆ ಸರಿಯಾಗಿ ಬರುತ್ತಿರಲಿಲ್ಲ. ಅಲ್ಲದೆ ಅಲ್ಲಿರುವ ಮಕ್ಕಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಕ್ಕಳಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಮೊರಾರ್ಜಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಾರ್ಡನ್ ಅರುಣ್ ಕುಮಾರ್ ಸ್ಥಳದಲ್ಲಿರಲಿಲ್ಲ. ಇದರಿಂದ ಸಿಟ್ಟಾದ ದರ್ಶನ್ ಪುಟ್ಟಣ್ಣಯ್ಯ ವಾರ್ಡನ್ ಅರುಣ್ ಕುಮಾರ್ ಮೊಬೈಲ್ ಗೆ ಕಾಲ್ ಮಾಡಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಾರ್ಡನ್ ಆಗಿ ನಿಮ್ಮ ಜವಾಬ್ದಾರಿ ಏನೆಂದು ಮೊದಲು ಹೇಳು, ಮಕ್ಕಳ ಯೋಗ ಕ್ಷೇಮ ನೋಡಿಕೊಳ್ಳುವುದನ್ನು ಬಿಟ್ಟು ಪಾಂಡವಪುರದಲ್ಲಿ ವಾಸ ಮಾಡುತ್ತಿದ್ದೀಯ. ಹಾಸ್ಟೆಲ್ ನಲ್ಲಿ ಇರಬೇಕಾದ ನೀನು ನಿನ್ನೆ ಮಧ್ಯಾಹ್ನ ಬಂದು ಲೆಕ್ಕ ತೆಗೆದುಕೊಂಡು ಹೋದವನು ಇದುವರೆಗೂ ಬಂದಿಲ್ಲ. ವಿದ್ಯಾರ್ಥಿಗಳಿಗೆ ಯಾವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟಿಲ್ಲ ಎಂದು ಮಕ್ಕಳೇ ಕಣ್ಣೀರು ಹಾಕುತ್ತಾ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ನಿಮ್ಮ ತಾಯಿಗೂ ಹಾಸ್ಟೆಲ್ಗೂ ಏನು ಸಂಬಂಧ
ನಿನ್ನ ತಾಯಿಯನ್ನು ಹಾಸ್ಟೆಲ್ ನಲ್ಲಿ ಏಕೆ ಬಿಟ್ಟಿದ್ದೀಯ. ಅವರಿಗೆ ಇಲ್ಲೇನು ಕೆಲಸ, ನಿಮ್ಮ ತಾಯಿಗೂ ಹಾಸ್ಟೆಲ್ಗೂ ಏನು ಸಂಬಂಧ, ಅವರೇಕೆ ಮಕ್ಕಳನ್ನು ಬೈಯುತ್ತಾರೆ. ಇದೇನು ನಿಮ್ಮ ಫ್ಯಾಮಿಲಿ ಬಿಸಿನೆಸ್ ಎಂದುಕೊಂಡಿದ್ದೀರಾ. ನಿಮ್ಮ ತಾಯಿ ಇಲ್ಲಿರಲು ಅನುಮತಿ ಕೊಟ್ಟವರು ಯಾರು ? ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ವಾರ್ಡನ್ ನಾನು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ತೇನೆ. ನನ್ನ ತಾಯಿ ಒಬ್ಬರೇ ಇರುವುದರಿಂದ ಬೇಜಾರು ಕಳೆಯಲೆಂದು ಹಾಸ್ಟೆಲ್ ನಲ್ಲಿದ್ದಾರೆ ಎಂದು ಏನೇನೋ ಸಬೂಬು ಹೇಳಲು ಹೊರಟರು. ಇದರಿಂದ ಇನ್ನೂ ಸಿಟ್ಟಾದ ದರ್ಶನ್ ಪುಟ್ಟಣ್ಣಯ್ಯ ಮಕ್ಕಳು ಎಂದಿಗೂ ಸುಳ್ಳು ಹೇಳುವುದಿಲ್ಲ. ಇನ್ನು ಮುಂದೆ ನೀನು ಹಾಸ್ಟೆಲ್ ಒಳಗೆ ಕಾಲಿಡಬೇಡ. ಇನ್ನೊಂದು ಸಾರಿ ನೀನು ನಿಮ್ಮ ಫ್ಯಾಮಿಲಿಯವರು ಇಲ್ಲಿಗೆ ಕಾಲು ಹಾಕಬಾರದು, ನೀನು ಕಾಲು ಹಾಕಿದರೆ ಕಾಲು ಕತ್ತರಿಸಿ ಬಿಡ್ತಿನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಈ ಹೇಳಿಕೆ ಸಾಕಷ್ಟು ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಬಹುತೇಕ ಜನರು ಶಾಸಕರು ವಾರ್ಡನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆಕ್ರೋಶದಲ್ಲಿ ಮಾತನಾಡುವ ಸಂದರ್ಭದಲ್ಲಿ ಕಾಲು ಕತ್ತರಿಸುತ್ತೇನೆ ಎಂದು ಹೇಳಿದ್ದಾರೆ. ಶಾಸಕರ ಮುಂದೆ ಮಕ್ಕಳು ವಾರ್ಡನ್ ಅವರ ನಿರ್ಲಕ್ಷ್ಯದ ಬಗ್ಗೆ ಕಣ್ಣೀರು ಸುರಿಸಿದ್ದರಿಂದ, ಶಾಸಕರು ಸಿಟ್ಟಿಗೆದ್ದು ಮಾತನಾಡಿದ್ದಾರೆ. ಅದರ ಹಿಂದೆ ಮಕ್ಕಳ ಮೇಲಿನ ಕಾಳಜಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.




