ವರದಿ: ಪ್ರಭು ವಿ ಎಸ್
ನೂತನ ಶಾಸಕ ಕೆ.ಎಂ. ಉದಯ್ ಅವರ 49ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅಭಿನಂದನೆ ಹಾಗೂ ಶಾಸಕ ರವರಿಗೆ ಬೆಳ್ಳಿ ಕಿರೀಟ ಧಾರಣೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಕಾಂಗ್ರೆಸ್ ಯುವ ಮುಖಂಡ ಸಿ.ಟಿ ಶಂಕರ್ ತಿಳಿಸಿದ್ದಾರೆ,
ಪಟ್ಟಣದ ಶಿವಪುರದ ತಿಮ್ಮದಾಸ್ ಹೋಟೆಲ್ ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು ಜೂನ್ 4ರ ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಿ ಗೌರವಿಸುವ ಜೊತೆಗೆ ಕೆ. ಎಂ. ಉದಯ್ ಅಭಿಮಾನಿ ಬಳಗದ ವತಿಯಿಂದ ಬೆಳ್ಳಿ ಕಿರೀಟ ಧಾರಣೆ ಹಾಗೂ ಗದೆಯನ್ನು ಸಮರ್ಪಿಸಲಾಗುವುದೆಂದು ಹೇಳಿದರು.
ಈಗಾಗಲೇ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು 6,000ಕ್ಕೂ ಹೆಚ್ಚುಆಸನದ ವ್ಯವಸ್ಥೆ 100 ಆಕರ್ಷಕ ಕಾಂಗ್ರೆಸ್ ಪಕ್ಷದ ಬಣ್ಣದ ಬಲೂನ್ ಹಾರಟ ಹಾಗೂ ಪಾರಿವಾಳ ಬಿಡುಗಡೆ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಹೆಸರಾಂತ ಗಾಯಕರಿಂದ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
ಕಳೆದ ಎರಡು ವರ್ಷಗಳಿಂದಲೂ ಕ್ಷೇತ್ರದಾದ್ಯಾಂತ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೆ. ಎಂ. ಉದಯ್ ಅವರ ಕಾರ್ಯ ಅನನ್ಯವಾಗಿದೆ ಎಂದರು.
ಕ್ಷೇತ್ರದಾದ್ಯಂತ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಜೊತೆಗೆ ಶಿಕ್ಷಣ ಆರೋಗ್ಯ ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದು ಇಂತಹ ಶಾಸಕರಿಗೆ ಅಭಿಮಾನಿಗಳು ಕಿರೀಟಧಾರಣೆ ಮಾಡುತ್ತಿರುವುದು ತಮಗೆ ಸಂತಸ ತಂದಿದೆ ಎಂದರು




