Friday, October 18, 2024

ಪ್ರಾಯೋಗಿಕ ಆವೃತ್ತಿ

ಆರ್‌ಎಸ್‌ಎಸ್‌ ಮೆರವಣಿಗೆಯಲ್ಲಿ ಭಾಗವಹಿಸಿ ಪಕ್ಷದ ಹುದ್ದೆ ಕಳೆದುಕೊಂಡ ಎಐಎಡಿಎಂಕೆ ಶಾಸಕ

ಆರ್‌ಎಸ್‌ಎಸ್ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿದ್ದ ಕನ್ಯಾಕುಮಾರಿ ಶಾಸಕ ಎನ್ ತಲವೈ ಸುಂದರಂ ಅವರನ್ನು ಎಐಎಡಿಎಂಕೆ ಪಕ್ಷದ ಕನ್ಯಾಕುಮಾರಿ (ಪೂರ್ವ) ಜಿಲ್ಲಾ ಘಟಕದ ಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಮಂಗಳವಾರ ‘ತಾತ್ಕಾಲಿಕವಾಗಿ’ ಕೈ ಬಿಡಲಾಗಿದೆ.

ಜೆ ಜಯಲಲಿತಾ ಸಂಪುಟದ ಮಾಜಿ ಸಚಿವ ಹಾಗೂ ಎಐಎಡಿಎಂಕೆಯ ಹಿರಿಯ ನಾಯಕ ತಲವೈ ಸುಂದರಂ ಅವರು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡ ಕಾರಣ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಲವೈ ಸುಂದರಂ ಅವರು ಎಐಎಡಿಎಂಕೆಯ ಹಿರಿಯ ಎರಡನೇ ಹಂತದ ನಾಯಕರಲ್ಲಿ ಒಬ್ಬರು, ಸಚಿವರಾಗಿ, ರಾಜ್ಯಸಭಾ ಸಂಸದರಾಗಿ ಮತ್ತು ನವದೆಹಲಿಗೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ವಿವಿಧ ಹುದ್ದೆಗಳನ್ನು ಅವರು ನಿಭಾಯಿಸಿದ್ದಾರೆ. ಅವರು ಕನ್ಯಾಕುಮಾರಿ ಜಿಲ್ಲೆಯ ಏಕೈಕ ಎಐಎಡಿಎಂಕೆ ಶಾಸಕರಾಗಿದ್ದಾರೆ.

ಆರ್‌ಎಸ್‌ಎಸ್ ಸ್ಥಾಪನೆಯ 100ನೇ ವರ್ಷದ ಸ್ಮರಣಾರ್ಥ ಕನ್ಯಾಕುಮಾರಿಯಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ಕಾಲ್ನಡಿಗೆ ಜಾಥಾಗೆ ತಲವೈ ಸುಂದರಂ ಚಾಲನೆ ನೀಡಿದ ಎರಡು ದಿನಗಳ ನಂತರ ಪಕ್ಷ ಅವರ ವಿರುದ್ದ ಕ್ರಮ ಕೈಗೊಂಡಿದೆ.

2026 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಎದುರಿಸಲು ಎಐಎಡಿಎಂಕೆ ತಯಾರಿ ನಡೆಸುತ್ತಿದ್ದು, ಬಿಜೆಪಿಯಿಂದ ಹೆಚ್ಚು ಅಂತರ ಕಾಯ್ದುಕೊಳ್ಳುತ್ತಿದೆ. ಈ ಸಮಯದಲ್ಲಿ ತಲವೈ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಪಕ್ಷದೊಳಗೆ ವಿರೋಧಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಭಾಗವಾಗಿದ್ದ ಎಐಎಡಿಎಂಕೆ ಪಕ್ಷ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈಯ ನಿರ್ಧಾರಗಳನ್ನು ವಿರೋಧಿಸಿ 2023ರಲ್ಲಿ ಒಕ್ಕೂಟದಿಂದ ಹೊರ ಬಂದಿತ್ತು. ಆ ಬಳಿಕ ಬಿಜೆಪಿ-ಆರ್‌ಎಸ್‌ಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿದೆ.

ತನ್ನನ್ನು ಪಕ್ಷದ ಹುದ್ದೆಗಳಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿರುವ ತಲವೈ ಸುಂದರಂ ಅವರು ” ನನ್ನ ವಿರುದ್ದದ ಕ್ರಮಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಕಳೆದ ಕೆಲ ವರ್ಷಗಳಿಂದ ಆರ್‌ಎಸ್‌ಎಸ್‌ ಜಾಥಾಗೆ ಚಾಲನೆ ಕೊಡುತ್ತಿದ್ದೇನೆ. ಕನ್ಯಾಕುಮಾರಿ ಶಾಸಕ ಎಂಬ ನೆಲೆಯಲ್ಲಿ ನನ್ನನ್ನು ಅವರು ಆಹ್ವಾನಿಸಿದ್ದರು. ಅದಕ್ಕೆ ಹೋಗಿದ್ದೆ. ನಾನು ನನ್ನ ಕ್ಷೇತ್ರದ ಕೆಲಸ ಮಾಡಿದ್ದೇನೆ. ಆರ್‌ಎಸ್‌ಎಸ್‌ ಜಾಥಾಗೆ ಚಾಲನೆ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಆರ್‌ಎಸ್‌ಎಸ್‌, ಹಿಂದುತ್ವದ ಜೊತೆ ಸಖ್ಯ ಬೆಳೆಸಿದರೆ ತಮಿಳುನಾಡಿನಲ್ಲಿ ರಾಜಕೀಯ ನಡೆಸಲು ಸಾಧ್ಯವಿಲ್ಲ ಎಂಬುವುದು ಎಐಎಡಿಎಂಕೆಗ ಅರಿವಾಗಿದೆ. ಆದ್ದರಿಂದ ಅದು ಹಿಂದುತ್ವ ಗುಂಪಿನಿಂದ ಅಂತರ ಕಾಯ್ದುಕೊಂಡು ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!