Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ನಗರ ಅಭಿವೃದ್ದಿಗೆ 50 ಕೋಟಿ ರೂ. – ರವಿಕುಮಾರ್

ಮಂಡ್ಯ ನಗರಸಭೆ ವ್ಯಾಪ್ತಿಯ ರಸ್ತೆಗಳ ಉನ್ನತೀಕರಣ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಶಾಸಕ ಪಿ.ರವಿಕುಮಾರ್ ಗೌಡ ಮಾಡಿರುವ ಲಿಖಿತ ಮನವಿಗೆ ಮುಖ್ಯಮಂತ್ರಿಗಳ ಅನುಮೋದನೆ ದೊರೆತು 52 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳು ಮಂಜೂರಾತಿ ದೊರೆತಿದೆ.

ಈ ಬಗ್ಗೆ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದ ಅವರು,ಮುಖ್ಯಮಂತ್ರಿ ಅವರ ಮೂಲ ಸೌಕರ್ಯ ಅಭಿವೃದ್ದಿ ಯೋಜನೆಯಡಿ ರಸ್ತೆ ಅಭಿವೃದ್ದಿ, ಕ್ರೀಡಾಂಗಣ ನಿರ್ಮಾಣ, ಮಳೆ ರಕ್ಷಣಾ ಗೋಡೆ, ಕೆಂಪೇಗೌಡ ಪ್ರತಿಮೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಅಗತ್ಯ ಅನುಮತಿ ದೊರೆತಿದೆ ಎಂದರು.

ಮಂಡ್ಯ ನಗರದ ಬನ್ನೂರು ರಸ್ತೆ ಅಭಿವೃದ್ದಿಗೆ 6.40 ಕೋಟಿ ರೂ. ಡಲ್ಫ್ ವತಿಯಿಂದ ಯೋಜನೆ ಮಂಜೂರಾಗಿದ್ದು ಫುಟ್ಬಾತ್ ನಿರ್ಮಾಣ ಹಾಗೂ ಸೈಕಲ್ ಪಾಥ್ ಹಾಗೂ ವಿದ್ಯುತ್ ದೀಪಗಳ ಅಳವಡಿಕೆಗೆ ಕ್ರಮ ವಹಿಸಲಾಗುವುದೆಂದು ತಿಳಿಸಿದರು.

ಮಂಡ್ಯ ವಿಶ್ವ ವಿದ್ಯಾಲಯ ಆವರಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಆಡಿಟೋರಿಯಂ ನಿರ್ಮಾಣ, ಕ್ರೀಡಾ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ಬಾಸ್ಕೆಟ್ ಬಾಲ್ ಕ್ರೀಡಾಂಗಣ,  ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮೂರನೇ ವಾರ್ಡಿನ ಬೀಡಿ ಕಾರ್ಮಿಕರ ಕಾಲೋನಿ ಅಭಿವೃದ್ದಿಗೆ 10 ಕೋಟಿ ರೂ. ಕಾಮಗಾರಿ, 1.60 ಕೋಟಿ ರೂ.ವೆಚ್ಚದಲ್ಲಿ ಹೊಸಹಳ್ಳಿ- ಕಾರಸವಾಡಿ ರಸ್ತೆ ಅಭಿವೃದ್ದಿ ಕಾಮಗಾರಿ, ನೀರಾವರಿ ಇಲಾಖೆಯಿಂದ 15 ಕೋಟಿ ರೂ ವೆಚ್ಚದಲ್ಲಿ ಮಳೆ ರಕ್ಷಣಾ ಗೋಡೆ ನಿರ್ಮಣ ಮಾಡಲಾಗುವುದೆಂದು ತಿಳಿಸಿದರು.

2 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿ ರಸ್ತೆ ಅಭಿವದ್ದಿ, ಪೌರಾಡಳಿತ ಇಲಾಖೆಯಿಂದ 10 ಕೋಟಿ ರೂ. ವೆಚ್ಚದಲ್ಲಿ ನಗರ ವ್ಯಾಪ್ತಿಯ ಮೂಲ ಸೌಕರ್ಯಗಳ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಮಂಡ್ಯನಗರ ವ್ಯಾಪ್ತಿಯ ರಸ್ತೆಗಳ ಉನ್ನತೀಕರಣ, ವೃತ್ತಗಳ ನವೀಕರಣ, ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಯೋಜನೆ ಮಂಜೂರಾಗಿದೆ ಎಂದು ಶಾಸಕರು ವಿವರಿಸಿದರು.

ರಸ್ತೆ ವಿವಾದ ಸುಖಾಂತ್ಯ

ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳಿಗೆ ನಾಮಕರಣ ಮಾಡುವ ವಿಚಾರವಾಗಿ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು, ನಗರದ ನೂರಡಿ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಹಾಗೂ ಕನ್ನಿಕಾ ಪರಮೇಶ್ವರಿ ದೇವಾಲಯದಿಂದ ಗೌರಿ ಶಂಕರ ಕಲ್ಯಾಣ ಮಂಟಪದವರೆಗಿನ ಬನ್ನೂರು ರಸ್ತೆಯನ್ನು ನಾಡಪ್ರಭು ಕೆಂಪೇಗೌಡ ರಸ್ತೆ ಎಂದು ನಾಮಕರಣ ಮಾಡಿ, ವಿವಾದವನ್ನು ಅಂತ್ಯಗೊಳಿಸಲಾಗಿದೆ ಎಂದು ಶಾಸಕರು ವಿವರಿಸಿದರು.

ಇಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದ್ದು, ಸರ್ಕಾರದ ಅನುಮತಿ ನಂತರ ನಾಮಕರಣ ಪ್ರಕ್ರಿಯೆ ಜಾರಿಯಾಗಲಿದೆ ಎಂದರು.

ಮಂಡ್ಯನಗರ ವ್ಯಾಪ್ತಿಯಲ್ಲಿ ಅಮೃತ ಭವನ ಕಾಮಗಾರಿಗೆ 60 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಮುಖ್ಯಮಂತ್ರಿಗಳ ಮನವೊಲಿಸಿ ಸದರಿ ಯೋಜನೆ ಅನುಷ್ಟಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ನಯೀಂ, ನಗರಸಭಾ ಸದಸ್ಯ ಶ್ರೀಧರ್ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ