Friday, September 20, 2024

ಪ್ರಾಯೋಗಿಕ ಆವೃತ್ತಿ

ಹನಕೆರೆ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಮಾ.7ರಂದು ಉಪವಾಸ ಸತ್ಯಾಗ್ರಹ: ಗಣಿಗ ರವಿಕುಮಾರ್

ಮಂಡ್ಯ ತಾಲೂಕಿನ ಹನಕೆರೆ-ಗೌಡಗೆರೆ ಗೇಟ್ ಬಳಿ ಅಂಡರ್ ಪಾಸ್ ನಿರ್ಮಿಸಲು ಆಗ್ರಹಿಸಿ ಮಾರ್ಚ್ 7ರಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹನಕೆರೆ-ಗೌಡಗೆರೆ ಗೇಟ್ ಬಳಿ ಅಂಡರ್ ಪಾಸ್(ಕೆಳ ಸೇತುವೆ) ನಿರ್ಮಿಸುವಂತೆ ಒತ್ತಾಯಿಸಿ ಚುನಾವಣೆಗೂ ಮುನ್ನ ಸಾವಿರಾರು ಜನರೊಂದಿಗೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಪ್ರತಿಭಟನೆಗೆ ಮಣಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಡರ್ ಪಾಸ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಡರ್ ಪಾಸ್ ಕೈ ಬಿಟ್ಟು ಮೇಲ್ಸೆತುವೆ ಮಾಡುವುದಾಗಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಮೇಲ್ಸೆತುವೆ ನಿರ್ಮಿಸಿದರೆ ಜನಸಾಮಾನ್ಯರು, ಅದರಲ್ಲೂ ಮಹಿಳೆಯರಿಗೆ ಓಡಾಡಲು ತೀವ್ರ ತೊಂದರೆಯಾಗುತ್ತದೆ.ಈ ಹಿನ್ನಲೆಯಲ್ಲಿ ನಮಗೆ ಈ ಹಿಂದೆ ಭರವಸೆ ನೀಡಿದಂತೆ ಅಂಡರ್ ಪಾಸ್ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿ ಮಾರ್ಚ್ 7 ರಂದು ರಾಮನಗರದ ಬಸವನಪುರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA) ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು.ಮುಂದೆ ಐದು ಜನರೊಂದಿಗೆ ಉಪವಾಸ ಮಾಡುತ್ತೇನೆಂದು ತಿಳಿಸಿದರು.

ಹನಕೆರೆ ಬಳಿ ಅಂಡರ್ ಪಾಸ್ ನಿರ್ಮಿಸುವಂತೆ ಹಲವು ಬಾರಿ ಒತ್ತಡ ಹಾಕಿದಾಗ, ಅಧಿಕಾರಿಗಳು ಆಗ ಮಾಡುತ್ತೇವೆ, ಈಗ ಮಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಿದ್ದಾರೆ. ಈಗ ಮೇಲ್ಸೆತುವೆ ಮಾಡುವುದಾಗಿ ಹೇಳುತ್ತಿದ್ದಾರೆ ಇದಕ್ಕೆ ಜನರ ತೀವ್ರ ವಿರೋಧವಿದೆ ಎಂದರು.

ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಮಾರ್ಚ್ 10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಲಿರುವ ಗ್ಯಾರಂಟಿ ಸಮಾವೇಶ ಉದ್ಘಾಟಿಸಲಿದ್ದಾರೆ. ಅಂದು 33 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉಮ್ಮಡಹಳ್ಳಿ ಗೇಟ್ ಬಳಿಯಿಂದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ವರೆಗೆ ರಸ್ತೆ ಅಭಿವೃದ್ಧಿ,ಸಕ್ಕರೆ ಕಾರ್ಖಾನೆ ವೃತ್ತ, ಸಂಜಯ ವೃತ್ತವನ್ನು ವಿಶ್ವ ದರ್ಜೆಯ ವೃತ್ತ ವನ್ನಾಗಿ ಪರಿವರ್ತನೆ ಮಾಡುತ್ತೇವೆ. ಅತ್ಯಾಧುನಿಕ ರೀತಿಯಲ್ಲಿ ಫುಟ್ ಪಾತ್ ಕಾಮಗಾರಿ, ಬಸ್ ಬೇ, ಸೈಕಲ್ ಬೇ, ಪಾರ್ಕಿಂಗ್ ಸ್ಥಳ ಎಲ್ಲವೂ ಒಳಗೊಂಡಂತಹ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ ಎಂದರು.

ವಿರೋಧ ಸರಿಯಲ್ಲ ಸಂಸದೆ ಸುಮಲತಾ ಅವರು ಹೊಸ ಸಕ್ಕರೆ ಕಾರ್ಖಾನೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ಆ ರೀತಿ ಹೇಳಿದರೆ ಅವರು,ಮಂಡ್ಯ ರೈತರ ವಿರುದ್ಧ ಇದ್ದಾರೆಂದು ತಿಳಿಯಬೇಕಾಗುತ್ತದೆ. ಅವರು ಈ ಹಿಂದೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಬೇಕು ಎಂಬ ಮನಸ್ಥಿತಿ ಹೊಂದಿದ್ದರು. ಹಿಂದಿದ್ದ ಸರ್ಕಾರವು ಹೊಸ ಕಾರ್ಖಾನೆ ಮಾಡಲಿಲ್ಲ,ನೀವೂ ಮಾಡಲಿಲ್ಲ. ಈಗ ನಾವು ಮಾಡುತ್ತಿದ್ದಾಗ ತೊಂದರೆ ನೀಡುತ್ತಿದ್ದೀರಿ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಿ ತೊಂದರೆ ಕೊಡಬೇಡಿ ಎಂದರು.

ಮೈ ಶುಗರ್ ಕಾರ್ಖಾನೆಯಿಂದ ಬೂದಿ ಹಾರುತ್ತದೆ,ಇದರಿಂ ಜನರಿಗೆ ತೊಂದರೆ ಆಗುತ್ತದೆ. ಕಬ್ಬಿನ ಗಾಡಿಗಳಿಂದ ಅಪಘಾತವಾಗುತ್ತಿದೆ,ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ ಎಂದೆಲ್ಲ ದೂರುತ್ತಿದ್ದರು. ಈ ಹಿನ್ನಲೆಯಲ್ಲಿ ಅತ್ಯಂತ ವಿಶಾಲವಾದ ಪ್ರದೇಶದಲ್ಲಿ 500 ಕೋಟಿ ವೆಚ್ಚದಲ್ಲಿ ಕೋ ಜನರೇಷನ್, ಎಥೆನಾಲ್ ಘಟಕ ಇರುವ ಕಾರ್ಖಾನೆ ಸ್ಥಾಪಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಇದಕ್ಕೆ ಅಡ್ಡಿ ಮಾಡಬೇಡಿ ಎಂದರು.

ರಿಯಲ್ ಎಸ್ಟೇಟ್ ಆಗಲ್ಲ

ಮೈ ಶುಗರ್ ಸುತ್ತ ಮುತ್ತಲಿರುವ ಭೂಮಿಯನ್ನು ಅಡವಿಟ್ಟು ಕಾರ್ಖಾನೆಗೆ ಹಣ ತರುವ ಉದ್ದೇಶ ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಅನುಕೂಲ ಮಾಡಿಕೊಡುವಂತಿದೆ ಎಂಬ ಮಾತು ಸಂಪೂರ್ಣ ಸುಳ್ಳು. ಈ ಹಿಂದೆ ಅಸಿಟೇಟ್ ಫ್ಯಾಕ್ಟರಿ ಜಾಗವನ್ನು ರಿಯಲ್ ಎಸ್ಟೇಟ್ ಅವರಿಗೆ ನೀಡುವಾಗ ನಾನು ಎಂಎಲ್ಎ ಆಗಿರಲಿಲ್ಲ. ನಾನು ಶಾಸಕನಾಗಿರುವುದು ಸೇವೆ ಮಾಡಲು ಹೊರತು ರಿಯಲ್ ಎಸ್ಟೇಟ್ ಮಾಡಲು ಅಲ್ಲ. ನನಗದರ ಅಗತ್ಯವೂ ಇಲ್ಲ. ಮಂಡ್ಯದಲ್ಲಿ ಸಣ್ಣದೊಂದು ವ್ಯಾಪಾರವನ್ನು ನಾನು ಮಾಡುವುದಿಲ್ಲ.ಹೊಸ ಕಾರ್ಖಾನೆ ನಿರ್ಮಾಣವಾಗುವರೆಗೂ ಈ ಹಿಂದಿನಂತೆ ಕಾರ್ಖಾನೆ ನಡೆಯಲಿದೆ ಎಂದರು.

ಟೇಪ್ ಹಿಡಿಯುವೆ ಮಂಡ್ಯ ನಗರದಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿ ಆಗಬೇಕು. ಮಂಡ್ಯದಲ್ಲಿ 33 ಕೋಟಿ ವೆಚ್ಚದ ರಸ್ತೆ ನಿರ್ಮಾಣದ ಟೆಂಡರ್ ಸಿಕ್ಕಿರುವ ಗುತ್ತಿಗೆದಾರರು ಶೇ.22ರಷ್ಟು ಕಡಿಮೆ ಮೊತ್ತದ ಟೆಂಡರ್ ಹಾಕಿದ್ದಾರೆ. ಆತ ಗುಣಮಟ್ಟದ ಕಾಮಗಾರಿ ಮಾಡಬೇಕು. ನಾನೇ ಟೇಪ್ ಹಿಡಿದುಕೊಂಡು ನಿಂತಿರುತ್ತೇನೆ ಎಂದು ಎಚ್ಚರಿಕೆ ನೀಡಿದರು. ಹನುಮಂದಿರಕ್ಕೆ ಬೆಳ್ಳಿ ಗದೆ

ಬೂದನೂರು ಗ್ರಾಮದ 35 ಜನರಿಗೆ ಹಕ್ಕು ಪತ್ರ ನೀಡಿದ್ದು, ಇನ್ನುಳಿದ ಎಂಟು ಮಂದಿಗೆ ಕಾನೂನು ತೊಡಕಿದ್ದು,ಬಗೆಹರಿಸಿ ಶೀಘ್ರದಲ್ಲೇ ಅವರಿಗೂ ಹಕ್ಕುಪತ್ರ ನೀಡುವುದಾಗಿ ತಿಳಿಸಿದರು.
ಬೂದನೂರಿನ ಜನರು ಹಕ್ಕುಪತ್ರ ಕೊಡಿಸಿದ ಹಿನ್ನೆಲೆಯಲ್ಲಿ ಪ್ರೀತಿಯಿಂದ ನನಗೆ ಬೆಳ್ಳಿ ಗದೆಯನ್ನು ನೀಡಿದ್ದಾರೆ. ಕೂಲಿ ಕಾರ್ಮಿಕರು ತಾವು ಕೂಲಿ ಮಾಡಿದ ಹಣದಲ್ಲಿ ನೀಡಿರುವ ಬೆಳ್ಳಿ ಗದೆಯನ್ನು ಹನುಮ ಜಯಂತಿಯ ದಿನ ಕೆರಗೋಡಿನ ಆಂಜನೇಯ ದೇವಸ್ಥಾನಕ್ಕೆ ನೀಡುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ಟಿ. ಚಂದ್ರಶೇಖರ್, ಹನಕೆರೆ ಜಯರಾಮ್, ಗೌಡಗೆರೆ ಗ್ರಾ.ಪಂ.ಅಧ್ಯಕ್ಷೆ ಸವಿತಾ, ಗೌಡಗೆರೆ ಜಯರಾಮ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!