ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಿರುವ ಮಂಡ್ಯ ಕ್ಷೇತ್ರದಲ್ಲಿ ಯುವಕರನ್ನು ತಪ್ಪುದಾರಿಗೆ ಎಳೆದು, ಬೆಟ್ಟಿಂಗ್ ಜಾಲಕ್ಕೆ ದೂಡುತ್ತಿರುವ ದುಷ್ಟಶಕ್ತಿಗಳನ್ನು ಮಟ್ಟ ಹಾಕುವುದೇ ನನ್ನ ಮುಂದಿನ ಗುರಿ ಎಂದು ಶಾಸಕ ಪಿ.ರವಿಕುಮಾರ್ ಗೌಡ ಎಚ್ಚರಿಕೆ ನೀಡಿದರು.
ಮಂಡ್ಯ ತಾಲ್ಲೂಕಿನ ಕೆರಗೋಡಿನಲ್ಲಿ ಭಾನುವಾರ ಬೆಳಿಗ್ಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಆಯೋಜಿಸಿದ್ದ ‘ಕೆರಗೋಡು ವಾಲಿಬಾಲ್ ಪ್ರೀಮಿಯರ್ ಲೀಗ್’ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬೆಟ್ಟಿಂಗ್ ಜೂಜುಕೋರರಿಂದ ಮನೆ ಮಠಗಳು ಹಾಳಾಗುತ್ತಿವೆ. ಬಾಳಿ ಬದುಕಬೇಕಾದ ವಯಸ್ಸಿನ ಹುಡುಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ಆಡಿಸುತ್ತಿರುವವರ ಆಟ ಇನ್ಮುಂದೆ ನನ್ನ ಮಂಡ್ಯ ಕ್ಷೇತ್ರದಲ್ಲಿ ನಡೆಯವುದಿಲ್ಲ’ ಎಂದರು.

ಬೆಟ್ಟಿಂಗ್ ಭೂಗತ ಜಾಲವನ್ನು ಮಟ್ಟಹಾಕಲು ಈಗಾಗಲೇ ವಿಧಾನಸಭೆಯಲ್ಲಿ ದನಿ ಎತ್ತಿದ್ದೇನೆ. ಜೀವವನ್ನೇ ತೆಗೆಯುವ ಈ ಅಪಾಯಕಾರಿ ಜೂಜು ನಡೆಸುತ್ತಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಿಡುವ ಮಾತೇ ಇಲ್ಲ. ಊರು ನೆಮ್ಮದಿಯಾಗಿರಬೇಕೆಂದರೆ ಜೂಜುಕೋರ ದುಷ್ಟಶಕ್ತಿಗಳನ್ನು ನಿಯಂತ್ರಿಸಲೇಬೇಕು ಎಂದರು.

ಮಂಡ್ಯ ವಾಲಿಬಾಲ್ ಲೀಗ್
ಸಣ್ಣಮಟ್ಟದಿಂದ ಪರಿಸರ ಸ್ನೇಹಿ ವಾಹನೋದ್ಯಮ ಆರಂಭಿಸಿ ಇಂದು ದೊಡ್ಡ ಮಟ್ಟದ ಉದ್ಯಮಿಯಾಗಿ ಬೆಳೆದಿರುವ ಎಲ್ಲರೊಳಗೊಂದಾಗು ವಿನಯ್ ಕುಮಾರ್ ಅವರ ಗ್ರಾಮೀಣ ಕ್ರೀಡಾಪಟುಗಳ ಮೇಲಿನ ಪ್ರೇಮ ಮೆಚ್ಚುವಂಥದ್ದು. ಟೂರ್ನಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಸಂತಸ ತಂದಿದೆ. ಮುಂದೆ, ಇದೇ ಮಾದರಿಯಲ್ಲಿ 50 ಹಳ್ಳಿಗಳ ವಾಲಿಬಾಲ್ ತಂಡಗಳನ್ನು ಗುರುತಿಸಿ ದೊಡ್ಡ ಮಟ್ಟದಲ್ಲಿ ‘ಮಂಡ್ಯ ವಾಲಿಬಾಲ್ ಲೀಗ್’ ಆಯೋಜಿಸಿದರೆ ಎಲ್ಲ ರೀತಿಯ ಸಹಕಾರವನ್ನು ನೀಡಲಿದ್ದೇನೆ. ಆ ಕನಸನ್ನು ವಿನಯ್ ಅವರು ನನಸು ಮಾಡುತ್ತಾರೆಂಬ ನಂಬಿಕೆ ಇದೆ ಎಂದು ಶಾಸಕ ರವಿಕುಮಾರ್ ಗಣಿಗ ಅವರು ಹೇಳಿದರು.
ಎಲ್ಲರೊಳಗೊಂದಾಗು ವಿನಯ್ ಕುಮಾರ್ ಮಾತನಾಡಿ, ಮಂಡ್ಯ ಕ್ಷೇತ್ರದಲ್ಲಿ ಜನಪರ ಶಾಸಕ ರವಿಕುಮಾರ್ ಅವರನ್ನು ಪಡೆದಿರುವ ಜನರು ಪುಣ್ಯವಂತರು, ಕ್ರೀಡೆಗೆ ಎಲ್ಲ ಸಹಕಾರ ನೀಡುತ್ತಿದ್ದಾರೆ. ವಾಲಿಬಾಲ್ ಲೀಗ್ ಗಾಗಿ ಕೆಲವು ತಂಡಗಳು ಕಳೆದ 18 ದಿನಗಳಿಂದ ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಅಭ್ಯಾಸ ನಡೆಸಿದ್ದಾರೆ, ಅವರ ಕ್ರೀಡಾ ಪ್ರೇಮವನ್ನು ಮೆಚ್ಚಬೇಕು ಎಂದರು.
ಕಾರ್ಯಕ್ರಮದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಅಧ್ಯಕ್ಷ ಮಂಗಲ ಯೋಗೀಶ್, ಚಿತ್ರಕೂಟ ಸಂಸ್ಥೆಯ ರಾಜೇಂದ್ರ ಸಿಂಗ್ ಬಾಬು, ಗ್ರಾಪಂ ಅಧ್ಯಕ್ಷ ನವೀನ್ ಕುಮಾರ್, ಮುಖಂಡರಾದ ದ್ಯಾಪಸಂದ್ರ ಶಂಕರಲಿಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.




