ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಂಡ್ಯ ಶಾಸಕ ರವಿಕುಮಾರ್ ಬೆಂಬಲಿಗರ ನಡುವೆ ಈಗ ಲಾಟರಿ ಹೇಳಿಕೆ ಕುರಿತು ವಾಗ್ಯುದ್ದ ನಡೆಯುತ್ತಿದೆ. ಈ ನಡುವೆ ಮಂಡ್ಯದಲ್ಲಿ ಶಾಸಕ ರವಿಕುಮಾರ್ ಮಾತನಾಡಿದ್ದು, ‘ನಾನು ಎರಡು ಸಾರಿ ಲಾಟರಿ ತೆಗೆದುಕೊಂಡೆ, ಈಗ ಬಂಪರ್ ಹೊಡೆದಿದೆ, ನಿಮ್ಮ ನಿಖಿಲ್ ಮೂರು ಬಾರಿ ಲಾಟರಿ ತೆಗೆದುಕೊಂಡರೂ ಯಾಕೆ ಬಂಪರ್ ಲಾಟ್ರಿ ಹೊಡೆಯಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಂಡ್ಯ ನಗರದ ಪೊಲೀಸ್ ಕಾಲೋನಿಯ 9ನೇ ವಾರ್ಡಿನಲ್ಲಿ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಅವರು, ‘ಲಾಟರಿ ಗೀಟರಿ ನಮಗೆ ಬೇಕಾಗಿಲ್ಲ, ಅಭಿವೃದ್ಧಿಯಷ್ಟೇ ಬೇಕು. ನಿಖಿಲ್ ಹುಡುಗರು ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ, ಇಷ್ಟೆಲ್ಲಾ ಮಾತನಾಡುವ ಅವಶ್ಯಕತೆ ಇದಿಯಾ ? ನನಗೇನೇದ್ದರೂ ಅಭಿವೃದ್ಧಿಯೊಂದೇ ಮಂತ್ರ, ನೀವು ಮಾಡಿ ನಾವು ಮಾಡೋಣ ಎಂದರು.

ಮಂಡ್ಯದಲ್ಲಿ ನಾನೂ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇನೆ. ನೀವು ಸಂಸದರಾಗಿ ಲಕ್ಷ ಲಕ್ಷ ಲೀಡ್ ತೆಗೆದುಕೊಂಡಿದ್ದೀರಲ್ಲ ? ನೀವು ಕೂಡ ಕೆಲಸ ಮಾಡಿ ಯಾರು ಬೇಡ ಎಂದವರು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು.
ಮೈಷುಗರ್ ಶಾಲೆ ಕಟ್ಟಡವನ್ನೂ ಅಭಿವೃದ್ಧಿ ಪಡಿಸೋಣ, ನಾನು ಸಹ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ, ಶಾಲೆ ಉಳಿವಿಗೆ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಸಹ ಸಹಕರಿಸಲಿ ಎಂದು ತಿಳಿಸಿದರು.




