Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕಾವೇರಿ ಆರತಿ ವಿರೋಧಿಸಿ ಮೇಣದಬತ್ತಿ ಮೆರವಣಿಗೆ

ರಾಜ್ಯ ಸರ್ಕಾರ ಕೃಷ್ಣರಾಜಸಾಗರದ ಬಳಿ ಅನಗತ್ಯ ದುಂದುವೆಚ್ಚದ ಕಾವೇರಿ ಆರತಿ ನಿಲ್ಲಿಸಿ, ಮಂಡ್ಯ ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಿ‌. ನಾಲೆಯ ಕಡೆ ಬಯಲಿಗೆ ನೀರು ಹರಿಸುವಂತೆ ಕನ್ನಡಪರ ಸಂಘಟನೆಗಳ ಮುಖಂಡರು ಸೋಮವಾರ ಸಂಜೆ ಮಂಡ್ಯನಗರದಲ್ಲಿ ಮೇಣದಬತ್ತಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದವು.

ಮಂಡ್ಯ ಜಿಲ್ಲೆಯ ಜನ ತಮ್ಮ ಮನೆ ಮನೆಗಳಲ್ಲಿ ಕಾವೇರಿಯನ್ನು ನಿತ್ಯ ಸ್ಮರಿಸುತ್ತಾರೆ. ರಾಜ್ಯ ಸರಕಾರ ಜನರ ಆಶಯ ಮತ್ತು ಅಗತ್ಯಗಳನ್ನು ಧಿಕ್ಕರಿಸಿ ಕಾವೇರಿ ಆರತಿಯಂತ ಉತ್ತರ ಭಾರತ ಪದ್ದತಿಯನ್ನು ತರಲು ಹೊರಟಿದೆ. ಇದರಿಂದ ನದಿ ಬಯಲು ಕಲುಷಿತಗೊಳ್ಳುವುದರ ಜತೆಗೆ ರೈತರಿಗೆ ಯಾವುದೇ ಪ್ರಯೋಜನ ಇಲ್ಲವಾಗಿದೆ ಎಂದು ಕಿಡಿಕಾರಿದರು.

ಜತೆಗೆ ಅಮ್ಯೂಸ್ ಮೆಂಟ್ ಪಾರ್ಕ್ ಹೆಸರಿನಲ್ಲಿ ಪರಿಸರ ಅರಣ್ಯ ನಾಶಕ್ಕೆ ಮುಂದಾಗಿದೆ. ಈ ರೀತಿಯ ಯೋಜನೆಗಳ ಮೂಲಕ ಇಡೀ ಕೃಷ್ಣರಾಜ ಸಾಗರ ಖಾಸಗಿಯವರ ಒಡೆತನಕ್ಕೆ ಹೋಗಲಿದೆ. ಈವರೆಗೆ ಕಾವೇರಿ ಆರತಿ, ಅಮ್ಯೂಸ್ ಮೆಂಟ್ ಸೇರಿದಂತೆ ಯಾವುದೆ ಯೋಜನೆಗಳ ಕ್ರಿಯಾಯೋಜನೆಯನ್ನು ಜನರ ಮುಂದಿಡದೆ ಜಿಲ್ಲೆಯ ರೈತರನ್ನು ಕತ್ತಲಲ್ಲಿಡಲಾಗಿದೆ. ಸರಕಾರಿ ಯೋಜನೆಯ ಮಾಹಿತಿಯನ್ನು ಕತ್ತಲಲ್ಲಿಡುವ ಸರಕಾರದ ಉದ್ದೇಶ ನಿಜಕ್ಕು ಸಂಶಯಾಸ್ಪದವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊನ್ನೆಯಷ್ಟೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರೈತಸಂಘಟನೆಗಳ ಸಭೆ ನಡೆಸಿದಾಗ ರೈತರು ಒಕ್ಕೊರಲಿನಿಂದ ಕಾವೇರಿ ಆರತಿಗೆ ತಮ್ಮ ಪ್ರತಿರೋಧ ತೋರಿದ್ದಾರೆ. ಈ ಕುರಿತು ರೈತರ ಅಹವಾಲನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದ ಬೆನ್ನಹಿಂದೆಯೆ ಕಾವೇರಿ ಆರತಿಗೆ ಪೂರಕ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ದೂರಿದರು.

ರಾಜ್ಯ ಸರಕಾರ ರೈತರ ಕಾಟಾಚಾರದ ಸಭೆ ನಡೆಸಿ ರೈತರ ಅಭಿಪ್ರಾಯಗಳನ್ನು ಧಿಕ್ಕರಿಸಿ ಕಾಮಗಾರಿ ಆರಂಭಿಸಿದೆ. ಈ ಮೂಲಕ ಮಂಡ್ಯ ಜಿಲ್ಲೆಯ ರೈತರ ಸಹನೆ ಕೆಣಕುವ ಕೆಲಸ ಮಾಡುತ್ತಿದೆ. ಸರ್ಕಾರಕ್ಕೆ ರೈತ ಪರ ಕಾಳಜಿಯಿದ್ದರೆ ಕೆರೆ ಕಟ್ಟೆಗಳನ್ನು ತುಂಬಿಸಲಿ.ನಾಲ ಕಡೆ ಬಯಲಿಗೆ ನೀರು ಹರಿಸಲಿ.ಕಾಣೆಯಾದ ಹಾಗೂ ಒತ್ತುವರಿಯಾದ ಕೆರೆಗಳನ್ನು ಸಂರಕ್ಷಿಸಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಕರವೇ ಜಯರಾಂ, ಎಂ.ವಿ.ಕೃ‍ಷ್ಣ, ಜೆ.ರಾಮಯ್ಯ, ಮಂಗಲ ಲಂಕೇಶ್, ಬೂದನೂರು ಸಿದ್ದರಾಜು, ಮುದ್ದೇಗೌಡ, ವೆಂಕಟೇಶ್ (ಆಟೋ) ಹಾಗೂ ಸಂಜು ಆಲಕೆರೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ