Friday, November 20, 2026

ಪ್ರಾಯೋಗಿಕ ಆವೃತ್ತಿ

ನವ ಮಂಡ್ಯ ಕಟ್ಟಲು ವಿದ್ಯಾರ್ಥಿಗಳು ನನ್ನೊಂದಿಗೆ ಕೈಜೋಡಿಸಿ : ರವಿಕುಮಾರ್

ಮಂಡ್ಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ಕಡಿಮೆ ಆಗಿರುವುದರಿಂದಲೇ ಮಂಡ್ಯ ನಗರಕ್ಕೆ ಹಲವು ಉದ್ಯಮಗಳು ಬರುತ್ತಿವೆ. ಇದರಿಂದಾಗಿ ನಿರುದ್ಯೋಗಿಗಳಿಗೆ ಉದ್ಯೋಗವೂ ಸಿಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಮಂಡ್ಯ ಬದಲಾವಣೆಯಾಗಿದೆ. ನವ ಮಂಡ್ಯ ಕಟ್ಟಲು ವಿದ್ಯಾರ್ಥಿಗಳು ನನ್ನೊಂದಿಗೆ ಕೈಜೋಡಿಸಿ ಎಂದು ಶಾಸಕ ಪಿ. ರವಿಕುಮಾರ್‌ ತಿಳಿಸಿದರು.

ಮಂಡ್ಯ ನಗರದ ಬಿ. ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಎನ್ನುವುದು`ಹುಲಿಯ ಹಾಲು’ ಇದ್ದಂತೆ. ಶಿಕ್ಷಣ ಎನ್ನುವ ಹಾಲನ್ನು ಕುಡಿದರೆ ರಾಜ್ಯ, ದೇಶ ಹಾಗೂ ಪ್ರಪಂಚದಲ್ಲೇ ಪ್ರಸಿದ್ಧಿಯಾಗಬಹುದು. ಇಂದು ಸನ್ಮಾನಿತರಾಗುತ್ತಿರುವ ವಿದ್ಯಾರ್ಥಿಗಳು ಸಾಧನೆ ಮಾಡಿ ಮುಂದಿನ ಮಕ್ಕಳಿಗೆ ನೀವೇ ಸನ್ಮಾನ ಮಾಡುವಂತಾಗಬೇಕೆಂದರು.

nudikarnataka.com

600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ

ಸಮಾರಂಭದಲ್ಲಿ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಸಕ ಪಿ. ರವಿಕುಮಾರ್‌ಗೌಡ ಅವರು ತಲಾ ಒಂದು ಸಾವಿರ ನಗದು, ಪ್ರಮಾಣ ಪತ್ರ ನೀಡಿ ನೀಡಿ ಗೌರವಿಸಿದರು.

ಬೆಳಕಿನೆಡೆಗೆ ನಡೆಯಬೇಕು

ವಿದ್ಯಾರ್ಥಿಗಳು ಅಪ್ರತಿಮ ಪ್ರತಿಭೆ ಹೊಂದಿದ್ದು, ನಿಮಗೆ ನೀವೇ ಜವಾಬ್ದಾರರು, ನೀವೇ ಬೆಳಕು. ನೀವು ಎಲ್ಲೇ ಹೋದರೂ ಬೆಳಕಿನೆಡೆಗೆ ನಡೆಯಬೇಕು ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆರ್ಶೀವಚನ ನೀಡಿದರು.

ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಉದ್ಧೇಶ ಆ ವ್ಯಕ್ತಿ ಸಮಾಜದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು. ಜೀವನದಲ್ಲಿ ಸಾಧನೆ ಮಾಡದೇ ಹೋದರೆ ಆ ಜೀವನವೇ ವ್ಯರ್ಥ. ಹಾಗಾಗಿ ಪ್ರತಿ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುಷ್ಟಕ್ಕೇ ಸೀಮಿತವಾಗದೆ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಸಾಧನೆ ಮಾಡಬೇಕೆಂದು ತಿಳಿ ಹೇಳಿದರು.

ಹಗಲು-ರಾತ್ರಿ ಶ್ರಮ ಹಾಗೂ ಕಷ್ಟಪಟ್ಟು ಉತ್ತಮ ಅಂಕ ಪಡೆದು ಪ್ರತಿಭಾವಂತರಾಗಿ, ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಿದ್ದೀರಿ. ಇದು ಇತರರಿಗೆ ಪ್ರೇರಣೆಯಾಗಲಿ ಎಂದೇ ಶಾಸಕ ಪಿ.ರವಿಕುಮಾರ್‌ಗೌಡ ಅವರು ಪ್ರತಿಭಾ ಪುರಸ್ಕಾರ ಏರ್ಪಡಿಸಿದ್ದಾರೆ. ನೀವು ಪೋಷಕರಿಗೆ ಮಾತ್ರ ಸೀಮಿತರಾಗದೆ, ನೀವು ದೇಶದ ಆಸ್ತಿಯಾಗಬೇಕು ಎಂದರು.

ಫಲವತ್ತಾದ ಮಣ್ಣಿಗೆ ಬೀಜ ಬಿತ್ತನೆ ಮಾಡಿದರೆ ಸಾಲದು. ಅದಕ್ಕೆ ಪೌಷ್ಠಿಕ ಆಹಾರ ಹಾಕಿದರೆ ಮಾತ್ರ ಬೆಳೆದು ಉತ್ತಮ ಫಸಲು ಕೊಡಲು ಸಾಧ್ಯ. ಅದೇರೀತಿ ಹಲವು ಮಕ್ಕಳ ಪರಿಸ್ಥಿತಿ ಆಗಿದೆ. ಯಾರು ತಮ್ಮ ಮಕ್ಕಳಿಗೆ ಸಂಸ್ಕೃತಿ, ಮೌಲ್ಯಗಳನ್ನು ಕಲಿಸುತ್ತಾರೋ ಅಂತಹವರು ಸಮಾಜದಲ್ಲಿ ಉತ್ತುಂಗಕ್ಕೇರಲು ಸಾಧ್ಯ. ಇದನ್ನು ಎಲ್ಲ ಪೋಷಕರು ಹಾಗೂ ಮಕ್ಕಳು ಅರಿಯಬೇಕೆಂದರು.

ಆದಿಚುಂಚನಗಿರಿ ಶಾಖಾ ಮಠ ಕೊಮ್ಮೇರಹಳ್ಳಿಯ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್ (ಶಿವಪ್ಪ), ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಇತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ