Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಟ್ಟುಪದ್ದತಿ ವಿರುದ್ದ ಗುಡುಗಿದ ಶಾಸಕ ರವಿಕುಮಾರ್: KRS ಇಂಜಿನಿಯರ್ ಸಸ್ಪೆಂಡ್ ಗೆ ಒತ್ತಾಯ

ಕೆ.ಆರ್.ಎಸ್ ಅಣೆಕಟ್ಟು ತುಂಬಿ ಲಕ್ಷಾಂತರ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿದು ಹೋಗುತ್ತಿರುವ ಸಂದರ್ಭದಲ್ಲಿಯೂ ಕನ್ನಂಬಾಡಿ ಅಚ್ಚುಕಟ್ಟಿಗೆ ಕಟ್ಟು ಪದ್ದತಿಯಲ್ಲಿ ನೀರು ಕೊಡುವುದಾಗಿ ಪ್ರಕಟಣೆ ಹೊರಡಿಸಿರುವ ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ವಿರುದ್ದ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಗುಡುಗಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋದ ವರ್ಷ ಬೆಳೆಯಾಗಿಲ್ಲ, ರೈತರು ಕಂಗೆಟ್ಟಿದ್ದಾರೆ. ಈಗ ಕಟ್ಟುಪದ್ದತಿಯಲ್ಲಿ ನೀರು ಕೊಡುತ್ತೇವೆ ಎಂದರೆ, ರೈತರು ಬಾಯಿಗೆ ಹಾಕ್ಕೋಬೇಕಾ ? ಯಾವ ಕಟ್ಟು ಪದ್ದತಿಯೂ ನಮಗೆ ಬೇಕಾಗಿಲ್ಲ, ಹಾಗೆಂದು ಪ್ರಕಟಣೆ ಹೊರಡಿಸಿರುವ ಇಂಜಿನಿಯರ್ ಅನ್ನು ಕೂಡಲೇ ಸರ್ಕಾರ ಸಸ್ಪೆಂಡ್ ಮಾಡಬೇಕು, ಈ ಬಗ್ಗೆ ಸರ್ಕಾರಕ್ಕೆ ನಾನೇ ಪತ್ರ ಬರೆಯುತ್ತೇನೆ ಎಂದರು.

ಅಣೆಕಟ್ಟೆ ಇರುವುದು ತಮಿಳುನಾಡಿಗೆ ನೀರು ಕೊಡುವುದಕ್ಕಲ್ಲ

ಕನ್ನಂಬಾಡಿ ಅಣೆಕಟ್ಟೆ ಇರುವುದು ತಮಿಳುನಾಡಿಗೆ ನೀರು ಕೊಡುವುದಕ್ಕಲ್ಲ, ಮೊದಲು ನಮ್ಮ ರೈತರು ಬೆಳೆ ಬೆಳೆಯಬೇಕು. ಕಳೆದ ಒಂದು ತಿಂಗಳಿಂದ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿಯುತ್ತಿದೆ. ಈಗ ನಮ್ಮಲ್ಲಿ ನೀರಿನ ಕೊರತೆ ಇಲ್ಲ, ಈಗಿರುವಾಗ ಮುಂದಿನ ಫೆಬ್ರವರಿವರೆಗೆ ಬೆಳೆಗೆ ನೀರು ಒದಗಿಸುತ್ತೇವೆ. ನೀರಾವರಿ ಇಲಾಖೆಯ ಅಧಿಕಾರಿಗಳು ಕೊಡುವುದಿಲ್ಲ, ಎಂದರೆ ನನಗೆ ನೀರನ್ನು ಬಿಡಿಸಿಕೊಳ್ಳುವುದು ಗೊತ್ತಿದೆ. ಈಗಿನ ಸಂದರ್ಭದಲ್ಲಿ ಯಾವ ಕಟ್ಟು ಪದ್ದತಿಯೂ ಬೇಕಾಗಿಲ್ಲ ಎಂದು ಗುಡುಗಿದರು.

ಈಗಾಗಲೇ ಕಾವೇರಿ ನೀರಾವರಿ ನಿಗಮದ ಎಂ.ಡಿ ಜೊತೆ ಮಾತನಾಡಿದ್ದೇನೆ, ಪ್ರಕಟಣೆ ಹೊರಡಿಸಿ ಇಂಜಿನಿಯರ್ ಅವರಿಂದ ಸ್ಪಷ್ಟನೆ ಕೇಳಲಾಗುವುದು ಎಂದು ತಿಳಿಸಿದ್ಧಾರೆ. ಹಾಗಾಗಿ ಅಚ್ಚುಕಟ್ಟಿನ ರೈತರು ಭಯಪಟುವ ಅಗತ್ಯವಿಲ್ಲ ಎಂದು ಹೇಳಿದರು.

ನಾವು ಅಣೆಕಟ್ಟೆಯಿಂದ ಎಷ್ಟೇ ನೀರು ಬಿಡುಗಡೆ ಮಾಡಿದರೂ, ಹುಲಿಕೆರೆ ಬುಗದ ಬಳಿ 2500 ಕ್ಯೂಸೆಕ್ಸ್ ನೀರಷ್ಟೇ ಹರಿದು ಹೋಗುವ ಸಾಮರ್ಥ್ಯವಿದೆ. ಈಗಾಗಲೇ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಶೇ.50ರಷ್ಟು ಕೆರೆಗಳು ತುಂಬಿವೆ. ಎಲ್ಲ ಕೆರೆಗಳನ್ನ ತುಂಬಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅಧಿಕಾರಗಳ ಪ್ರಕಟಣೆಗೆ ಯಾರು ತಲೆಕೆಡಿಸಿಕೊಳ್ಳಬೇಕಿಲ್ಲ, ಕಟ್ಟೆಯಿಂದ ನೀರು ಬಿಡಿಸಿಕೊಂಡು ರೈತರ ಹಿತಕಾಪಾಡುವುದು ನನಗೆ ಗೊತ್ತಿದೆ ಎಂದು ಭರವಸೆ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ