Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಂದಿನ 2 ದಿನ ಕೆಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ

ಈ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ, ರಾಜ್ಯದ ಹಲವೆಡೆ ಬರ ಉಂಟಾಗಿದೆ. ನೀರಿನ ಅಭಾವ ಉಂಟಾಗಿದ್ದು, ಜನರು ಬೆಳೆದ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿವೆ. ರೈತರು ಆರ್ಥಿಕವಾಗಿ ನೆಲಕಚ್ಚುವಂತಾಗಿದೆ. ಇದೀಗ, ಹಿಂಗಾರು ಮಳೆ ಚುರುಕುಗೊಂಡಿದ್ದು, ರಾಜ್ಯದ ಕೆಲವೆಡೆ ಆಗಾಗ ಮಳೆಯಾಗುತ್ತಿದೆ. ಮುಂದಿನ ಎರಡು ದಿನ ರಾಜ್ಯದ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

“ಮುಂದಿನ ಎರಡು ದಿನ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಜತೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇರುವ ಬಹಳಷ್ಟು ಸಾಧ್ಯತೆ ಇದೆ” ಎಂದು ಹೇಳಿದೆ.

“ಕರಾವಳಿಯ ಉತ್ತರ ಕನ್ನಡ ಜಿಲ್ಲೆ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಕಲಬುರ್ಗಿ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ.

“ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಂದೆರಡು ಕಡೆಗಳಲ್ಲಿ ಸೆ.22ರಂದು ಮಳೆಯಾಗಿದೆ. ಪುತ್ತೂರು ಎಚ್‌ಎಂಎಸ್ (ದಕ್ಷಿಣ ಕನ್ನಡ ಜಿಲ್ಲೆ) ತಲಾ 4 ಸೆಂ.ಮೀ. ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ) 3 ಸೆಂ.ಮೀ. ಸುಳ್ಯ (ದಕ್ಷಿಣ ಕನ್ನಡ ಜಿಲ್ಲೆ) 2 ಸೆಂ.ಮೀ. ಉಪ್ಪಿನಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಪಣಂಬೂರು, ಮಾಲೂರು, ಕೋಲಾರ (ಎರಡೂ ಕೋಲಾರ ಜಿಲ್ಲೆ) ತಲಾ 1 ಸೆಂ.ಮೀ ಮಳೆ ದಾಖಲಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು” ಎಂದು ಹೇಳಿದೆ.

“ರಾಜ್ಯದಲ್ಲಿ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 36.6 ಡಿಗ್ರಿ ಸೆಲ್ಸಿಯಸ್‌ ಶಿರಾಳಿಯಲ್ಲಿ ದಾಖಲಾಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 17.1 ಡಿಗ್ರಿ ಸೆಲ್ಸಿಯಸ್‌ ವಿಜಯಪುರದಲ್ಲಿ ದಾಖಲಾಗಿದೆ” ಎಂದು ಮಾಹಿತಿ ನೀಡಿದೆ.

ಮುಂದಿನ ಎರಡು ದಿನ ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಬಹಳಷ್ಟು ಸಾಧ್ಯತೆ ಇರುತ್ತದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ ಎಂದು ಹೇಳಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!