Saturday, October 19, 2024

ಪ್ರಾಯೋಗಿಕ ಆವೃತ್ತಿ

ಭಾರತದ ಪ್ರಧಾನಿಯೊಬ್ಬರು ಪತ್ರಿಕಾಗೋಷ್ಟಿ ನಡೆಸಿ ಇಂದಿಗೆ ಒಂದು ದಶಕ: ಕಳೆದ 10 ವರ್ಷಗಳಿಂದ ಒಂದೇ ಒಂದು ಪತ್ರಿಕಾಗೋಷ್ಟಿ ನಡೆಸದ ಮೋದಿ !

ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನರೇಂದ್ರ ಮೋದಿ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಟಿಯನ್ನು ನಡೆಸಿಲ್ಲ, ಪತ್ರಕರ್ತರನ್ನು ಎದುರಿಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ವ್ಯಕ್ತಿಯೋರ್ವರು ‘ಕೊನೆಯ ಪತ್ರಿಕಾಗೋಷ್ಠಿ’ಯನ್ನು ನಡೆಸಿ ಇಂದಿಗೆ ಸರಿಸುಮಾರು 10 ವರ್ಷಗಳು ಕಳೆದಿದೆ ಎಂದು ಪತ್ರಕರ್ತ ಪಂಕಜ್ ಪಚೌರಿ ಹೇಳಿಕೊಂಡಿದ್ದಾರೆ.

2014ರ ಜ.3ರಂದು ಅಂದಿನ ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪತ್ರಿಕಾಗೋಷ್ಟಿಯನ್ನು ನಡೆಸಿದ್ದರು. ಪತ್ರಿಕಾಗೋಷ್ಠಿಯ ವೀಡಿಯೋವನ್ನು ಪಂಕಜ್ ಪಚೌರಿ ಹಂಚಿಕೊಂಡಿದ್ದು, ಈ ಪತ್ರಿಕಾಗೋಷ್ಠಿಯಲ್ಲಿ 62 ಪೂರ್ವ ನಿರ್ಧರಿತವಲ್ಲದ ಪ್ರಶ್ನೆಗಳನ್ನು 100ಕ್ಕೂ ಅಧಿಕ ಪತ್ರಕರ್ತರ ಸಮ್ಮುಖದಲ್ಲಿ ಉತ್ತರಿಸಲಾಗಿತ್ತು ಎಂದು ಪಂಕಜ್ ಪಚೌರಿ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಪಂಕಜ್ ಪಚೌರಿ ಅವರು ಮನಮೋಹನ್‌ ಸಿಂಗ್‌ ಅವರ ಸರಕಾರದಲ್ಲಿ ಪ್ರಧಾನಿಯ ಮಾಹಿತಿ ಮತ್ತು ಸಂವಹನ ಸಲಹೆಗಾರರಾಗಿದ್ದರು. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ‘ಪ್ರಧಾನಿ’ ಮೌನವಾಗಿದ್ದಾರೆಂದು ಬಿಜೆಪಿ ಟೀಕಿಸುತ್ತಿತ್ತು.

ಮನಮೋಹನ್‌ ಸಿಂಗ್‌ ನಡೆಸಿದ ಪತ್ರಿಕಾಗೋಷ್ಟಿ ಭಾರತದ ಪ್ರಧಾನಿಯವರ ಕೊನೆಯ ಪತ್ರಿಕಾಗೋಷ್ಠಿ ಎಂದು ಹೇಳಬಹುದು. ಏಕೆಂದರೆ ನರೇಂದ್ರ ಮೋದಿ ಪ್ರಧಾನಿಯಾಗಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ನಡೆಸಲು ನಿರಾಕರಿಸಿದ್ದಾರೆ. ಅವರು 2023ರ ಯುಎಸ್ ಪ್ರವಾಸದ ಸಮಯದಲ್ಲಿ ಶ್ವೇತಭವನದಲ್ಲಿ ಪತ್ರಕರ್ತರ ಎರಡು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಆ ಬಳಿಕ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿಲ್ಲ.

ಮೋದಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಷಣಗಳನ್ನು ಮಾಡುತ್ತಾರೆ ಮತ್ತು ರಾಷ್ಟ್ರಕ್ಕೆ ಸಂದೇಶಗಳನ್ನು ಕಳುಹಿಸಲು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ ಆಯೋಜಿಸುತ್ತಾರೆ. ಆದರೆ ಸ್ಕ್ರಿಪ್ಟ್‌ ಇಲ್ಲದ ಯಾವುದೇ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿರುವುದು ಅಪರೂಪವಾಗಿತ್ತು. ಇದನ್ನು ನ್ಯೂಯಾರ್ಕ್‌ ಟೈಮ್ಸ್‌ ಕೂಡ ಉಲ್ಲೇಖಿಸಿತ್ತು.

ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿ ನಡೆಸಿದ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಮುಕ್ತವಾಗಿ ತಮ್ಮ ಸರ್ಕಾರದ ಸಾಧನೆ ಮತ್ತು ವೈಫಲ್ಯಗಳ ಬಗ್ಗೆ ಮಾತನಾಡಿದ್ದರು. ಕಾಂಗ್ರೆಸ್‌ ಪಕ್ಷದ ವೈಫಲ್ಯ, ಉತ್ಪಾದನಾ ರಂಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿರುವುದರ ಬಗ್ಗೆ ಮಾತನಾಡಿದ್ದರು.

“>

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಪತ್ರಿಕಾಗೋಷ್ಟಿ ನಡೆಸಿಲ್ಲ ಎಂದು ಈ ಮೊದಲು ಪ್ರತಿಪಕ್ಷಗಳು ನಿರಂತರವಾಗಿ ಆರೋಪಿಸಿದ್ದವು. ನಿರುದ್ಯೋಗ, ಹಣದುಬ್ಬರ, ಪುಲ್ವಮಾ ಘಟನೆ ಸೇರಿ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮಾತನಾಡುವಂತೆ ಪ್ರತಿಪಕ್ಷಗಳು ಆಗ್ರಹಿಸಿದ್ದವು.

ಪಚೌರಿ ಅವರ ಪೋಸ್ಟ್‌ನ್ನು  ಶೇರ್‌ ಮಾಡಿದ ಕಾಂಗ್ರೆಸ್‌ ಸಂಸದ ಮನೀಶ್‌ ತಿವಾರಿ, ತಮ್ಮ 10 ವರ್ಷದ ಸೇವಾವಧಿಯಲ್ಲಿ ಮನಮೋಹನ್‌ ಸಿಂಗ್‌ 117 ಪತ್ರಿಕಾಗೋಷ್ಠಿ ನಡೆಸಿದ್ದಾರೆಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!