ಚುನಾವಣಾ ಬಾಂಡ್ ಮಾಹಿತಿ ಹೊರಬಿದ್ದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ‘ಸುಲಿಗೆ ದಂಧೆ’ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ. “ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಸರ್ಕಾರವನ್ನು ಬೀಳಿಸಲು ಈ ಹಣವನ್ನೇ ಬಳಸಲಾಗಿದೆ” ಎಂದು ದೂರಿದ್ದಾರೆ.
ಭಿವಾಂಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ “ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ಕಾರ್ಪೋರೇಟ್ ದೈತ್ಯಗಳ ಮೇಲೆ ಒತ್ತಡವನ್ನು ಹೇರಿ ಹಣವನ್ನು ಸುಲಿಗೆ ಮಾಡುತ್ತಿದೆ” ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
“ಭಾರತದ ರಾಜಕೀಯ ಆರ್ಥಿಕತೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಒಂದು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದರು. ಅದುವೇ ಚುನಾವಣಾ ಬಾಂಡ್. ಈಗ ಇದು ಭಾರತದ ಅತೀ ದೊಡ್ಡ ಕಾರ್ಪೋರೇಟ್ ಕಂಪನಿಗಳಿಂದ ಹಣವನ್ನು ಸುಲಿಗೆ ಮಾಡಲು ಪ್ರಧಾನಿ ಮೋದಿಯ ಯೋಜನೆ ಎಂಬುವುದು ಸಾಬೀತಾಗಿದೆ” ಎಂದು ಕಾಂಗ್ರೆಸ್ ಮುಖಂಡ ದೂರಿದರು.
“ಭಾರತದಲ್ಲಿರುವ ದೊಡ್ಡ ದೊಡ್ಡ ಕಾಂಟ್ರಾಕ್ಟ್‌ಗಳನ್ನು ನಿಮಗೆ ನೀಡಬೇಕಾದರೆ ನಮ್ಮ ಪಕ್ಷಕ್ಕೆ ಹಣ ನೀಡಬೇಕು ಎಂದು ಕಾರ್ಪೊರೇಟ್ ಸಂಸ್ಥೆಗಳ ಮೇಲೆ ಒತ್ತಡ ಮತ್ತು ಬೆದರಿಕೆ ಹಾಕಿ ಈ ಚುನಾವಣಾ ಬಾಂಡ್ ಮೂಲಕ ಹಣ ಪಡೆಯಲಾಗಿದೆ” ಎಂದು ರಾಹುಲ್ ಆರೋಪಿಸಿದರು.
“ಈ ಹಿಂದೆ ಬಿಜೆಪಿಗೆ ದೇಣಿಗೆಯನ್ನು ನೀಡದ ಸಂಸ್ಥೆಗಳು ಇಡಿ ಅಥವಾ ಸಿಬಿಐ ದಾಳಿಯ ಬಳಿಕ ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆಯನ್ನು ನೀಡಿದೆ. ದೊಡ್ಡ ದೊಡ್ಡ ಗುತ್ತಿಗೆಗಳನ್ನು ಪಡೆದ ಬಳಿಕ ಬಿಜೆಪಿಗೆ ಹಣ ನೀಡಿರುವುದು ಕೂಡಾ ನಾವು ದಿನಾಂಕಗಳನ್ನು ಹೋಲಿಸಿದಾಗ ತಿಳಿದುಬರುತ್ತದೆ. ಶೆಲ್ ಕಂಪನಿಗಳ ಮೂಲಕ ಹಣ ನೀಡಲಾಗಿದೆ” ಎಂದು ಕಾಂಗ್ರೆಸ್ ಮುಖಂಡ ಹೇಳಿದರು.
ಚುನಾವಣಾ ಬಾಂಡ್ ಮಾಹಿತಿಯನ್ನು ನೀಡಲು ಅಧಿಕ ಸಮಯ ಕೋರಿದ ಎಸ್‌ಬಿಐ ಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಬ್ಯಾಂಕ್ ಬಾಂಡ್‌ನ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದು, ಆಯೋಗ ಮಾಹಿತಿ ಬಿಡುಗಡೆ ಮಾಡಿದೆ. ಈ ಬಾಂಡ್ ಮೂಲಕ ಅಧಿಕ ದೇಣಿಗೆಯನ್ನು ಪಡೆದ ಪಕ್ಷ ಬಿಜೆಪಿ ಆಗಿದ್ದು, ಹಲವಾರು ಕಾರ್ಪೋರೇಟ್ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿದೆ.