Friday, September 20, 2024

ಪ್ರಾಯೋಗಿಕ ಆವೃತ್ತಿ

ರಕ್ಷಣಾ ಇಲಾಖೆಗೆ ಹೆಚ್ಚು ಹಣ ವ್ಯಯ ಅಘಾತಕಾರಿ ಬೆಳವಣಿಗೆ: ನ್ಯಾ.ನಾಗಮೋಹನ್ ದಾಸ್

ಜಗತ್ತಿನ ಎಲ್ಲ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ(ಯುದ್ಧ) ಹೆಚ್ಚು ಹಣ ವ್ಯಯಿಸುತ್ತಿವೆ. ಯುದ್ದಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.

ಮಂಡ್ಯ  ಜಿಲ್ಲಾಡಳಿತದ ವತಿಯಿಂದ ಕಲಾಮಂದಿರದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಜಗತ್ತಿನಲ್ಲಿ ಯುದ್ಧಕ್ಕೆ ಸಂಬಂಧಪಟ್ಟ ಉದ್ಯಮ ಹೆಚ್ಚು ಬೆಳೆದಿದೆ ಯುದ್ಧದ ಪರಿಣಾಮ, ಶಾಲಾ- ಕಾಲೇಜಿನ ಶುಲ್ಕ, ಆಹಾರ, ಪೆಟ್ರೊಲ್ ಡೀಸೆಲ್, ಔಷಧಿ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ  ಹೆಚ್ಚುತ್ತದೆ. ನಮ್ಮೆಲ್ಲರ ಬದುಕು ಕಷ್ಟಕ್ಕೆ ಸಿಲುಕುತ್ತಿದೆ. ಇದು ಅಘಾತಕಾರಿ ಬೆಳವಣಿಗೆ. ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಯುದ್ಧಗಳೇ ನಡೆಯುವುದಿಲ್ಲ. ರಕ್ಷಣಾ ಇಲಾಖೆಯ ಹಣವನ್ನು  ಸರ್ಕಾರಗಳು ಜನಕಲ್ಯಾಣಕ್ಕಾಗಿ ಹೆಚ್ಚು ವ್ಯಯಿಸಬಹುದು ಎಂದರು.

ಯುದ್ಧ ಜಗತ್ತನ್ನ ಕಾಡುತ್ತಿದೆ

ಅಣು ಯುದ್ಧ ಜಗತ್ತನ್ನ ಕಾಡುತ್ತಿದೆ. ವಿಶ್ವದಲ್ಲಿ ಅನೇಕ ಯುದ್ಧಗಳು ನಡೆದ ಪರಿಣಾಮ ಕೋಟ್ಯಾಂತರ ಮಂದಿ ಸಾವಿಗೀಡಾಗಿದ್ದಾರೆ. ಈ ಸಂದರ್ಭದಲ್ಲಿ ನಾವು ಮಾನವ ಹಕ್ಕುಗಳ ಬಗ್ಗೆ ಚಿಂತಿಸಬೇಕಿದೆ. 1939 ರಲ್ಲಿ ನಡೆದ ಎರಡನೇ ಮಹಾಯುದ್ಧದಲ್ಲಿ ಜಗತ್ತು ಎಂದೂ ಕಾಣದಂತಹ ವಿಪತ್ತು, ವಿನಾಶ, ಭೀಕರ ನರಹತ್ಯೆ, ಆರ್ಥಿಕ ದುಂದುವೆಚ್ಚ, ಅವ್ಯವಸ್ಥೆ ನೋಡಿತು. ಈ ಯುದ್ಧದಿಂದ ಬಂದೊದಗಿದ ರೋಗ ರುಜಿನೆಗಳಿಂದ ಮತ್ತು ಆಹಾರದ ಅಭಾವದಿಂದ ಅನೇಕ ಜನರು ಸಾವನ್ನಪ್ಪಿದರು. ಬಾಂಬುಗಳನ್ನು ಸಿಡಿಸಿ ನಗರಗಳನ್ನು ಧ್ವಂಸ ಮಾಡಲಾಯಿತು, ಹಳ್ಳಿಗಳಿಗೆ ಮತ್ತು ಕಾಡುಗಳಿಗೆ ಬೆಂಕಿ ಹಚ್ಚಲಾಯಿತು. ಕೈಗಾರಿಕೆಗಳನ್ನು, ಅಣೆಕಟ್ಟುಗಳನ್ನು, ರಸ್ತೆಗಳನ್ನು, ಮೂಲಸೌಕರ್ಯಗಳನ್ನು ನಾಶಮಾಡಲಾಯಿತು. ಇದರಿಂದ ಉಂಟಾದ ದುಷ್ಪರಿಣಾಮಗಳು ಜಗತ್ತಿನ ಜನರನ್ನು ದಂಗುಬಡಿಸಿ ಮತ್ತೊಂದು ಯುದ್ಧ ನಡೆದರೆ ಇಡೀ ಜಗತ್ತೇ ನಾಶವಾಗುತ್ತದೆ ಎಂಬ ಕಟು ಸತ್ಯದ ಅರಿವು ಮೂಡಿಸಿತು. ಇದರ ಪರಿಣಾಮವಾಗಿ 1945 ರಲ್ಲಿ ವಿಶ್ವಸಂಸ್ಥೆ ಸ್ಥಾಪನೆಯಾಯಿತು ಎಂದರು.

ಜಾಗತಿಕ ಸಮಸ್ಯೆಯನ್ನು ಶಾಂತಿಯ ಮೂಲಕವೇ ಬಗೆಹರಿಸಬೇಕು. ವಿಶ್ವಸಂಸ್ಥೆ  ಸ್ಥಾಪನೆಯಿಂದಾಗಿ ಜಗತ್ತಿನಲ್ಲಿ ಶಾಂತಿ ನೆಲಸಿತು. ಆದರೂ ಸಹ ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಯುದ್ಧ ನಡೆದಿದೆ. ಉಕ್ರೇನ್- ರಷ್ಯಾ ಇಸ್ರೇಲ್- ಪ್ಯಾಲೆಸ್ಟೈನ್ ಯುದ್ಧದಿಂದ ಲಕ್ಷಾಂತರ ಜನ ಮರಣ ಹೊಂದಿದ್ದಾರೆ. ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದರು.

ಸಂವಿಧಾನ ಉಳಿಸಿ

ಭಾರತದಲ್ಲಿ ಮಾನವ ಹಕ್ಕುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪಾಳೆಗಾರರ ವ್ಯವಸ್ಥೆ ಅಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ಇದಕ್ಕೆ ಸಂವಿಧಾನ ಕಾರಣ. ಸಂವಿಧಾನ ಉಳಿಸಿ ಮುಂದಿನ ಪೀಳಿಗೆಗೆ ಸಂವಿಧಾನ ಹಾಗೂ ಮಾನವ ಹಕ್ಕುಗಳ ಮಹತ್ವವನ್ನು ತಿಳಿಸಿ ಕೊಡಬೇಕಿದೆ ಎಂದರು.

ದಲಿತರು ಹಾಗೂ ಮಹಿಳೆಯರು ಇಂದು ರಾಜಕಾರಣ, ಸಿನಿಮಾ ರಂಗ ಸೇರಿದಂತೆ ಅನೇಕ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸಂವಿಧಾನ ಕಾರಣ. ಇದಕ್ಕಾಗಿ ಮಾನವ ಹಕ್ಕುಗಳನ್ನು ಉಳಿಸಿಕೊಂಡು, ವ್ಯವಸ್ಥಿತವಾಗಿ ಜಾರಿಗೊಳಿಸಿ, ಎಲ್ಲರಿಗೂ ತಲುಪಿಸಬೇಕು. ಮಾನವ ಹಕ್ಕುಗಳು ಉಳಿಯುವ ಕಡೆ ಶಾಂತಿ ನೆಲಿಸುತ್ತದೆ ಎಂದರು.

ಪ್ರತಿನಿತ್ಯ ಮಹಿಳೆ ಹಾಗೂ ದಲಿತರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಮಾನವ ಹಕ್ಕುಗಳು ಎಲ್ಲಿವೆ ಎಂದು ನಾವು ಪ್ರಶ್ನಿಸಿಕೊಳ್ಳಬೇಕು. ಮಾನವ ಹಕ್ಕುಗಳನ್ನು ಪರಿಪೂರ್ಣವಾಗಿ ಪ್ರತಿಯೊಬ್ಬರು ಅನುಭವಿಸಬೇಕು. ಅಂತಕರಣದಲ್ಲಿ ಮಾನವೀಯತೆ ಹಾಗೂ ಶಾಂತಿಯ ಗುಣ ಬೆಳೆದರೆ ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ದೊರೆಯುತ್ತದೆ  ಎಂದರು.

ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಮಾನವ ಹಕ್ಕುಗಳು ಹುಟ್ಟುತ್ತಲೇ ಪ್ರತಿಯೊಬ್ಬರಿಗೂ ದೊರಕುತ್ತವೆ. ನಾವು ಜೀವಂತ ಇರುವವರೆಗೂ ಮಾನವ ಹಕ್ಕು ನಮ್ಮ ಜೊತೆಗಿರುತ್ತವೆ. ಇದನ್ನು ಮಾನವ ಹಕ್ಕುಗಳಿಗೆ ಪೆಟ್ಟು ಬೀಳದಂತೆ ರಕ್ಷಿಸಬೇಕಾಗುತ್ತದೆ. ಮಾನವ ಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ನೈತಿಕ, ಮಾನವೀಯ, ಹೃದಯವಂತಿಕೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮನೆಗಳಲ್ಲಿ ಮಕ್ಕಳಿಗೆ ಮಾನವ ಹಕ್ಕುಗಳ ಬಗ್ಗೆ ತಿಳಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ಮಾನವ ಹಕ್ಕುಗಳ ಪ್ರತಿಜ್ಞೆ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!