Friday, September 20, 2024

ಪ್ರಾಯೋಗಿಕ ಆವೃತ್ತಿ

ಮಗನ ಕಾಲೇಜು ಶುಲ್ಕ ಕಟ್ಟುವುದಕ್ಕಾಗಿ ಬಸ್ಸಿಗೆ ಸಿಲುಕಿ ಪ್ರಾಣಬಿಟ್ಟ ತಾಯಿ!

ಮಗನ ಕಾಲೇಜು ಶುಲ್ಕ ಕಟ್ಟಲು ಕಷ್ಟಪಡುತ್ತಿದ್ದ ತಾಯಿಯೋರ್ವಳು, ಅಪಘಾತದಿಂದ ಪ್ರಾಣ ಕಳೆದುಕೊಂಡರೆ ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತದೆ ಎಂಬ ತಪ್ಪು ಮಾಹಿತಿ ಪಡೆದುಕೊಂಡು ಬಸ್ಸಿನ ಮುಂದೆ ಜಿಗಿದು ಪ್ರಾಣತೆತ್ತ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕಳೆದ ಜೂನ್ 28ರಂದು ತಮಿಳುನಾಡಿನ ಸೇಲಂನಲ್ಲಿ ಮಹಿಳೆಯೋರ್ವರು, ಬಸ್ಸು ಬರುತ್ತಿರುವುದನ್ನು ಗಮನಿಸಿಯೇ ರಸ್ತೆ ದಾಟಲು ಪ್ರಯತ್ನಿಸಿ, ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

“>

ಘಟನೆಯ ಬಳಿಕ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಈ ಬಗ್ಗೆ ತನಿಖೆ ನಡೆಸಿದಾಗ, ಮಗನ ಕಾಲೇಜು ಫೀಸು ಕಟ್ಟಲು ತಾಯಿ ಪ್ರಾಣ ಬಲಿ ಕೊಟ್ಟಿದ್ದಾರೆ ಎಂಬ ಸತ್ಯಾಂಶ ಹೊರಬಿದ್ದಿದೆ.

‘ಅಪಘಾತದಿಂದ ಮೃತಪಟ್ಟ ಮಹಿಳೆಯನ್ನು 45ರ ಹರೆಯದ ಪಾಪತಿ ಎಂದು ಗುರುತಿಸಲಾಗಿದೆ. ಜೂ. 28 ರಂದು ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದ ಬಳಿಕ ಸಾವನ್ನಪ್ಪಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಅಪಘಾತ ಸಂತ್ರಸ್ತರಿಗೆ ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತದೆ ಎಂದು ಯಾರೋ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಹಾಗಾಗಿ ತಾನು ಅಪಘಾತದಿಂದ ಸತ್ತರೆ ತನ್ನ ಮಗನ ಕಾಲೇಜು ಶುಲ್ಕ 45,000 ರೂಪಾಯಿಗಳನ್ನು ಪಾವತಿಸಲು ಸರ್ಕಾರದಿಂದ ಆರ್ಥಿಕ ಸಹಾಯವನ್ನು ನೀಡುತ್ತದೆ ಎಂದು ಅವಳು ನಂಬಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಈ ನಿರ್ಧಾರ ಕೈಗೊಂಡಿದ್ದಾರೆ. ಮಹಿಳೆಯು ಸೇಲಂನ ಕಲೆಕ್ಟರ್ ಕಚೇರಿಯಲ್ಲಿ ನೈರ್ಮಲ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೂ ಕೂಡ ಒಳಗಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ದಿನ, ಪಾಪತಿ ಬಸ್ಸಿನ ಮುಂದೆ ಜಿಗಿಯಲು ಆರಂಭಿಕ ಪ್ರಯತ್ನವನ್ನು ಮಾಡುವಾಗಲೇ ಆಕೆಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿತ್ತು. ಸ್ವಲ್ಪ ಸಮಯದ ನಂತರ ಇನ್ನೊಂದು ಬಸ್ಸಿನ ಮುಂದೆ ಜಿಗಿದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ದುರಂತವೆಂದರೆ, ಪತಿಯಿಂದ ಬೇರ್ಪಟ್ಟಿದ್ದ ನಂತರ ಪಾಪತಿಯು ಕಳೆದ 15 ವರ್ಷಗಳಿಂದ ತನ್ನ ಮಕ್ಕಳನ್ನು ಒಂಟಿಯಾಗಿಯೇ ಕಷ್ಟಪಟ್ಟು ಬೆಳೆಸಿದ್ದರು.

ಅಂದಿನ ಘಟನೆಯ ವಿಡಿಯೋವನ್ನು ಟ್ವಿಟರ್‍‌ನಲ್ಲಿ ಹಂಚಿಕೊಂಡಿರುವ ಅರವಿಂದ್ ಗುಣಶೇಖರ್ ಎಂಬುವವರು, ‘ಮಗನ ಕಾಲೇಜ್ ಫೀಸ್ ಕಟ್ಟಲು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ದುರ್ಬಲ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಆದರೂ ನಾವು ‘ಅಭಿವೃದ್ಧಿ’ಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಹಲವಾರು ನೆಟ್ಟಿಗರು ಕಮೆಂಟ್ ಮಾಡಿದ್ದು, ‘ನಿಜಕ್ಕೂ ಇದೊಂದು ಹೃದಯ ವಿದ್ರಾವಕ ಘಟನೆ. ಇದಕ್ಕೆಲ್ಲ ರಾಜಕೀಯ ಸೇರಿದಂತೆ ನಮ್ಮ ಸಮಾಜದಲ್ಲಾಗುವ ಬೆಳವಣಿಗೆಗಳೇ ಕಾರಣ. ಈ ರೀತಿ ಆಗಬಾರದಿತ್ತು. ನಮ್ಮ ಬಗ್ಗೆಯೇ ನಾವು ಚಿಂತಿಸಿಕೊಳ್ಳಬೇಕಾದ ಸಂದರ್ಭ ಇದು’ ಎಂದು ಕನಿಕರ ವ್ಯಕ್ತಪಡಿಸಿದ್ದಾರೆ.

ಕೃಪೆ : ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!