Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದ ಬಿಜೆಪಿ ಸಂಸದರಿಗೆ ಮೋದಿ ಎದುರಿಗೆ ನಿಂತು ಮಾತನಾಡುವ ತಾಕತ್ತಿಲ್ಲ: ಸಿದ್ದರಾಮಯ್ಯ ಗುಡುಗು

“ಕೇಂದ್ರ ಸರ್ಕಾರವು ನಿರಂತರ ದ್ರೋಹ, ವಂಚನೆಯಿಂದ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ 15% ನಿಂದ ಕೆಳಗೆ ಜಾರಿ 9%ಗೆ ಕುಸಿದಿದೆ. ಈ ದೊಡ್ಡ ಕುಸಿತಕ್ಕೆ ಕೇಂದ್ರದ ಮಲತಾಯಿ ಧೋರಣೆ ಮತ್ತು ವಂಚನೆಯೇ ಕಾರಣ. ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಕೋಲೆ ಬಸವನ ರೀತಿಯಲ್ಲಿ ಮೋದಿ ಅವರ ಎದುರಿಗೆ ತಲೆ ಅಲ್ಲಾಡಿಸುವುದು ಬಿಟ್ಟರೆ, ರಾಜ್ಯದ ಪಾಲನ್ನು ಬಾಯಿ ಬಿಟ್ಟು ಕೇಳಲೇ ಇಲ್ಲ” ಎಂದು ಸಿಎಂ ಸಿದ್ದರಾಮಯ್ಯ ಜರೆದಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್‌ಮಂತರ್‌ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ನಾನು ವಿಧಾನಸಭಾ ಅಧಿವೇಶನದಲ್ಲಿ ಮೇಲಿಂದ ಮೇಲೆ ಒತ್ತಾಯಿಸಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಒತ್ತಾಯಿಸಿ ಕೇಂದ್ರದ ಮುಂದೆ ರಾಜ್ಯದ ಹಕ್ಕು ಮಂಡಿಸಿ ಎಂದು ಆಗ್ರಹಿಸಿದೆ. ಅವರು ಕೇಳಲಿಲ್ಲ. ಇವರು ಕೊಡಲಿಲ್ಲ” ಎಂದು ಬಿಜೆಪಿ ವಿರುದ್ಧ ಸಿಎಂ ಹರಿಹಾಯ್ದರು.“ನಮಗೆ ಅನ್ಯಾಯ ಸರಿಪಡಿಸಲು ವಿಶೇಷ ಅನುದಾನವಾಗಿ 11,495 ಸಾವಿರ ಕೋಟಿ ಕೊಡ್ತೀವಿ ಎಂದು ಘೋಷಿಸಿದರು. ಆದರೆ ಈ ಹಣ ಕೊಡಬೇಡಿ ಎಂದು ತಡೆ ಹಿಡಿದವರೇ ಆರ್ಥಿಕ ಸಚೆವೆ ನಿರ್ಮಲಾ ಸೀತಾರಾಮನ್ ಅವರು. ಆದರೆ ಈಗೇಕೆ ಸುಳ್ಳು ಹೇಳ್ತಿದ್ದೀರಿ ಮೇಡಂ” ಸಿಎಂ ವ್ಯಂಗ್ಯವಾಡಿದರು.

“>

ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ಅವರೇ ಈ ಮಟ್ಟದ ದ್ರೋಹ ಮಾಡಿದ ಬಳಿಕವೂ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮೋದಿ ಅವರ ಕೇಂದ್ರ ಸರ್ಕಾರ ರಚಿಸಿದ 15 ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತ ರಾಜ್ಯಗಳಿಂದ ಒಬ್ಬೇ ಒಬ್ಬ ಸದಸ್ಯನೂ ಇರಲಿಲ್ಲ. ಇದರಿಂದ ನಮ್ಮ ರಾಜ್ಯಗಳಿಗೆ ಅನ್ತಾಯ ಆಗಿದೆ. ಇದಕ್ಕೆ ಕಾರಣ ಮೋದಿಯವರೇ” ಎಂದು ಸಿಎಂ ದೂರಿದರು.

“ಬಿಜೆಪಿಯವರು ಎಷ್ಟೇ ಸುಳ್ಳುಗಳನ್ನು ಹೇಳಿದರೂ ಸತ್ಯ ಮುಚ್ಚಿ ಹಾಕಲು ಸಾಧ್ಯವಿಲ್ಲ. ಯಡಿಯೂರಪ್ಪ, ಬೊಮ್ಮಾಯಿ, ಮೋದಿಯವರೇ, ಕೇಂದ್ರ ಸರ್ಕಾರದ ಬಜೆಟ್ ದಾಖಲೆಗಳನ್ನೇ ಪರಿಶೀಲಿಸಿ ನೋಡಿ, ನಮಗಾಗಿರುವ ವಂಚನೆಯ ಪ್ರಮಾಣ ಅದರಲ್ಲಿ ದಾಖಲಾಗಿದೆ. 15ನೇ ಹಣಕಾಸು ಆಯೋಗ ಒಂದರಿಂದಲೇ ಇದುವರೆಗೂ 1,87000 ಕೋಟಿ ಒಟ್ಟು ರಾಜ್ಯಕ್ಕೆ ಅನ್ಯಾಯ ಆಗಿದೆ” ಎಂದು ಸಿದ್ದರಾಮಯ್ಯ ತಿಳಿಸಿದರು.

“ರಾಜ್ಯಕ್ಕೆ ಭೀಕರ ಬರಗಾಲ ಬಂತು. ಸೆಪ್ಟೆಂಬರ್‌ನಿಂದ ನಿರಂತರವಾಗಿ ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಎಂದು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ಬರಪರಿಹಾರ ಕೊಟ್ಟಿಲ್ಲ. ನಾನೇ ಡಿ. 19ರಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಖುದ್ದಾಗಿ ಭೇಟಿ ಮಾಡಿ ವಿನಂತಿಸಿದೆ. ಆದರೂ ಇವತ್ತಿಗೂ ಒಂದು ಪೈಸೆ ಬಂದಿಲ್ಲ. ಈ ಬಗ್ಗೆ ಇನ್ನೂ ಒಂದೂ ಸಭೆಯನ್ನೂ ನೆಪಕ್ಕೂ ಕರೆದಿಲ್ಲ. ಇದರಿಂದ ಒಂದು ರೂಪಾಯಿ ಕೂಡ ಬಂದಿಲ್ಲ.” ಎಂದು ತಿಳಿಸಿದರು.

“ಬರದಿಂದ ರಾಜ್ಯದ ಜನತೆ ಕಂಗಾಲಾಗದಂತೆ ರಾಜ್ಯ ಸರ್ಕಾರವೇ ಪರಿಹಾರ ನೀಡಿದೆ. 31 ಲಕ್ಷ ರೈತರಿಗೆ 650 ಕೋಟಿ ಬರ ಪರಿಹಾರವನ್ನು ರಾಜ್ಯದ ಬೊಕ್ಕಸದಿಂದಲೇ ಕೊಟ್ಟಿದ್ದೇವೆ. ಇನ್ನೂ ಲಕ್ಷ ಲಕ್ಷ ರೈತರಿಗೆ ಪರಿಹಾರ ಕೊಡುವವರಿದ್ದೇವೆ. ಕೇಂದ್ರ ತನ್ನ ಕೈಯಿಂದ ಪರಿಹಾರ ಕೊಡುವುದಲ್ಲ. ನಮ್ಮ ಹಣ ಅವರ ಬಳಿ ಇದೆ. ಅದರಲ್ಲಿ ರಾಜ್ಯದ ಪಾಲನ್ನು ವಾಪಾಸ್ ಕೊಡಬೇಕಿತ್ತು. ಇದರಲ್ಲೂ ಒಂದೇ ಒಂದು ರೂಪಾಯಿ ಕೊಡಲಿಲ್ಲ. ನಾವು ಇನ್ನೂ ಎನ್‌ಡಿಆರ್‌ಎಫ್‌ ನಿಧಿಗಾಗಿ ಕಾಯುತ್ತಲೇ ಇದ್ದೇವೆ. ಈ ಹಣ ಕೊಡಿಸಿ ಯಡಿಯೂರಪ್ಪ, ಅಶೋಕ್, ನಿರ್ಮಲಾ ಸೀತಾರಾಮನ್ ಅವರೇ” ಎಂದು ಕೇಳಿದರು.

“ಪಾರ್ಲಿಮೆಂಟಲ್ಲಿ ರಾಜ್ಯದ ಪರವಾಗಿ ಬಾಯಿ ಬಿಡಲು ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರಿಗೆ ಭಯ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ಕೊಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಪಾರ್ಲಿಮೆಂಟಲ್ಲಿ ಬಜೆಟ್‌ನಲ್ಲೇ ಘೋಷಿಸಿದರು. ಇದರಲ್ಲೂ ಒಂದು ರೂಪಾಯಿ ಕೂಡ ಬಂದಿಲ್ಲ. ಅವರೇ ಘೋಷಿಸಿ ಅವರೇ ಕೈ ಎತ್ತಿಬಿಟ್ಟರು. ಒಂದೇ ಒಂದು ರೂಪಾಯಿ ಕೂಡ ಇವತ್ತಿನವರೆಗೂ ಕೊಡಲಿಲ್ಲ ಎಂದು ಬಜೆಟ್ ಪ್ರತಿ ತೋರಿಸಿ ಪ್ರಶ್ನಿಸಿದರು.

“ಮಾಜಿ ಪ್ರಧಾನಿ, ಜೆಡಿಎಸ್‌ನ ವರಿಷ್ಠ ದೇವೇಗೌಡರು ಮೋದಿಯವರನ್ನು ಹೊಗಳುತ್ತಾ ಕುಳಿತಿದ್ದಾರೆ. ಹಾಗಿದ್ದರೆ ಮೇಕೆದಾಟು, ಕೃಷ್ಣ ಮೇಲ್ದಂಡೆಗೆ ಅನುಮತಿ ಕೊಡಿಸಲಿ. ರಾಜ್ಯಕ್ಕೆ ಬರಬೇಕಾದ ಹಣ ವಾಪಾಸ್ ಕೊಡಿಸಲಿ” ಎಂದು ತಿಳಿಸಿದರು.

“ರಾಯಚೂರು ಏಮ್ಸ್ ಕೊಡ್ತೀವಿ ಎಂದರು. ನಾನು ಸಿಎಂ ಆಗಿ ಮೂರು ಪತ್ರ ಬರೆದೆ. ಆದರೆ, ಇವತ್ತಿನವರೆಗೂ ಏಮ್ಸ್ ಬರಲಿಲ್ಲ. ಪತ್ರಗಳಿಗೆ ಉತ್ತರವೂ ಬರಲಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಬರೆದ ಪತ್ರಕ್ಕೆ ಕೇಂದ್ರ ಉತ್ತರ ಕೊಡಲಿಲ್ಲ. ಇದು 7.5 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ” ಎಂದರು.

“ಎಲ್ಲಾ ಜಾತಿ, ಎಲ್ಲ ಧರ್ಮದ ಬಡವರಿಗೆ ನಾವು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು. ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಎಂದರೂ ಅಕ್ಕಿ ಕೊಡಲಿಲ್ಲ. ಇದರಿಂದ ನಾವು ನೇರವಾಗಿ ಜನರಿಗೇ ಹಣ ಕೊಟ್ಟೆವು. ಇಷ್ಟೆಲ್ಲಾ ರಾಜ್ಯದ ಜನರಿಗೆ ದ್ರೋಹ ಮಾಡಿ ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯ ಎನ್ನುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರಿಗೆ ನೆರವು ನೀಡುವುದು ಬಿಟ್ಟಿಭಾಗ್ಯ ಎಂದು ಅಹಂಕಾರ ಮೆರೆದರು” ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

“ಸ್ವಾತಂತ್ರ ಬಂದಾಗಿನಿಂದ ದೇಶದ ಸಾಲ 2014ರವರೆಗೂ 54 ಲಕ್ಷ ಕೋಟಿ ಮಾತ್ರ ಇತ್ತು. ಈಗ 180 ಲಕ್ಷ ಕೋಟಿಗೆ ಭಾರತದ ಸಾಲ ಏರಿಕೆ ಆಗಿದೆ. ಮೋದಿ ಅವಧಿ ಒಂದರಲ್ಲೇ 130 ಲಕ್ಷ ಕೋಟಿ ಸಾಲ ಮಾಡಿದ್ದಾರೆ. 130 ಕೋಟಿ ಸಾಲ ಒಬ್ಬರೇ ಮಾಡಿದ್ದಾರಲ್ಲಾ ಇದು ಸಾಧನೆಯಾ?” ಎಂದು ಕೇಳಿದರು.

“ಸೆಸ್, ಸರ್ಚಾರ್ಜ್ ಮೂಲಕವೂ ರಾಜ್ಯಕ್ಕೆ ನಿರಂತರ ದ್ರೋಹ, ಅನ್ಯಾಯ ಆಗುತ್ತಿದೆ. ಬರಗಾಲ ಬಂದಿದೆ. ನರೇಗಾ ಕೂಲಿಯ ದಿನಗಳನ್ನು ನಿಯಮದ ಪ್ರಕಾರ 150 ದಿನಗಳಿಗೆ ಏರಿಸಿ ಎಂದು ಮನವಿ ಮಾಡಿದರೂ ಏರಿಕೆ ಮಾಡಲಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!