ಮಂಡ್ಯ ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಸಿದ್ದತೆ ಹಾಗೂ ನಿರ್ವಹಣೆಯ ಮೂಲಕ ಬಹುಕೋಟಿ ವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ, ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಡಿಸೆಂಬರ್ ನಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಕಸಾಪ ರಾಜ್ಯಾಧ್ಯಕ್ಷ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಭಾರಿ ಅವ್ಯವಹಾರ ನಡೆಸಿದ್ದಾರೆಂದು ದೂರಿದರು.
ನಾಡು, ನುಡಿ, ನೆಲ-ಜಲದ ವಿಷಯವಾಗಿ ನಡೆಯಬೇಕಾದ ಸಮ್ಮೇಳನವು ವಿವಾದದ ಆಗರವಾಗಿದೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಸ್ವಯಂ ವಿವಾದಗಳ ಸುಳಿಯಲ್ಲಿರುವುದರ ಸದುಪಯೋಗ ಪಡೆದ ಅಧಿಕಾರಿ ವರ್ಗ ಬಾರಿ ಅವ್ಯವಹಾರ ನಡೆಸಿದೆ ಎಂದು ದೂರಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ಹಾಗೂ ಮತ್ತಿತರ ಸಿದ್ದತೆಗೆ ಅಳವಡಿಸಿದ್ದ ಜರ್ಮನ್ ಟೆಂಟ್‌ನ ಚದರ ಅಡಿಗೆ 30 ರಿಂದ 35 ರೂ. ಇದೆ. ಆದರೆ 3 ದಿನಗಳ ಸಮ್ಮೇಳನಕ್ಕೆ ಚದರ ಅಡಿಯೊಂದಕ್ಕೆ 69 ರೂ ಬಾಡಿಗೆ ನೀಡಲಾಗಿದೆ. 2025ರ ಫೆಬ್ರವರಿ ಮಾಹೆಯಲ್ಲಿ ನಡೆದ 15 ದಿನಗಳ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ‘ಖಾದಿ ಉತ್ಸವ’ದಲ್ಲಿ ಇದೇ ಟೆಂಟ್‌ಗೆ 55 ರೂ.ನಂತೆ ನೀಡಲಾಗಿದೆ ಎಂದು ವಿವರಿಸಿದರು.
ಮೂರು ದಿನಗಳ ಸಮ್ಮೇಳನದಲ್ಲಿ 4.69 ಲಕ್ಷ ಮಂದಿಗೆ ಆಹಾರ ವಿತರಣೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಆದರೆ 8.1 ಲಕ್ಷ ಮಂದಿಗೆ ಆಹಾರ ನೀಡಿರುವುದಾಗಿ ಬಿಲ್ ಮಾಡಲಾಗಿದ್ದು, ಕೋಟ್ಯಾಂತರ ರೂ ಅವ್ಯಹಾರ ನಡೆದಿರುವ ಸಾಧ್ಯತೆ ಇದೆ. ಅಲ್ಲದೆ ವಿಶೇಷ ಆಹ್ವಾನಿತ ವಿದೇಶಿಗರು ಹಾಗೂ ನೊಂದಾಯಿತ ಸದಸ್ಯರಿಗೆ ಐಷಾರಾಮಿ ಹೋಟೆಲ್‌ಗಳಲ್ಲಿ ತಂಗಲು 1.97 ಕೋಟಿ ಹಣ ವ್ಯಯಿಸಿರುವುದಾಗಿ ಲೆಕ್ಕ ತೋರಿಸಲಾಗಿದೆ ಎಂದು ದೂರಿದರು.
ಸಮ್ಮೇಳನ ನಡೆದ ಜಾಗ ಶುಚಿಗೊಳಿಸಲು 1050 ಪೌರಕಾರ್ಮಿಕರಿಗೆ 33 ಲಕ್ಷ ವೇತನ ನೀಡಿರುವುದಾಗಿ ಲೆಕ್ಕ ನೀಡಲಾಗಿದೆ. ಆದರೆ ಈ ಪ್ರಮಾಣದಲ್ಲಿ ಪೌರಕಾರ್ಮಿಕರನ್ನು ನಿಯೋಜಿಸಲಾಗಿಲ್ಲ. ನಗರದ 8 ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ನಿಯೋಜಿಸಿದ್ದು, ಅವರಿಗೆ ಯಾವುದೇ ವೇತನ ನೀಡಲಾಗಿಲ್ಲ. ಅಲ್ಲದೇ ಮಹೇಶ್ ಜೋಶಿ 2.50 ಕೋಟಿ ರೂ ಹಣದ ಲೆಕ್ಕ ನೀಡದಿರುವುದು ಒಂದಕ್ಕೊಂದು ಹೊಂದಾಣಿಕೆಯಾಗದ ರೀತಿಯಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮ್, ಮನು, ಮುದ್ದೇಗೌಡ, ಶಿವರಾಮು ಹಾಗೂ ಆಟೋ ವೆಂಕಟೇಶ್ ಇದ್ದರು.




