ಕೆ.ಆರ್.ಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ 12ನೇ ವರ್ಷದ ಮಹಾಗಣಪತಿಯ ವಿಸರ್ಜನಾ ಕಾರ್ಯಕ್ರಮ ಮತ್ತು ಶೋಭಾಯಾತ್ರೆಯು ಕೆ.ಆರ್.ಪೇಟೆ ಪಟ್ಟಣದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಶಾಸಕ ಹೆಚ್.ಟಿ.ಮಂಜು ಅವರು ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಗಣೇಶೋತ್ಸವಕ್ಕೆ ಹಾಗೂ ಶೋಭಾಯಾತ್ರೆಗೆ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಸೇರಿದಂತೆ ಹಲವು ಗಣ್ಯರು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಮಂಗಳವಾದ್ಯ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಐಡ್ರಾಲಿಕ್ ಡಿಜೆ, ನಾಸಿಕ್ ಡೋಲು ನಾದ, ಡೊಳ್ಳು ಕುಣಿತ, ಪೂಜಾ ಕುಣಿತ, ಗೊಂಬೆಗಳ ಕುಣಿತ, ಇತ್ಯಾದಿ ವಿವಿಧ ಪ್ರಾಕಾರದ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಮೆರವಣಿಗೆಯು ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಆರಂಭವಾಗಿ ಪ್ರವಾಸಿ ಮಂದಿರ ವೃತ್ತ, ತಾಲ್ಲೂಕು ಆಸ್ಪತ್ರೆ ರಸ್ತೆಯ ಮೂಲಕ ಸಾಗಿ, ಪುನಃ ಅದೇ ಮಾರ್ಗದಲ್ಲಿ ಸಾಗಿದ ಮೆರವಣಿಗೆಯು ಪೊಲೀಸ್ ಠಾಣೆ ರಸ್ತೆ, ಹಳೆ ಪುರಸಭಾ ಕಚೇರಿ, ಬೋರಲಿಂಗೇಗೌಡರ ಸರ್ಕಲ್, ಅಂಬೇಡ್ಕರ್ ನಗರ, ಬಸವೇಶ್ವರನಗರ, ದುರ್ಗಾಭವನ್ ಸರ್ಕಲ್, ಮುಕ್ಕಟ್ಟೆ ಚೌಕ, ಮೂಡಲ ಆಂಜನೇಯಸ್ವಾಮಿ ದೇವಸ್ಥಾನದ ಮೂಲಕ ಸಾಗಿ ದೇವಿರಮ್ಮಣ್ಣಿ ಕೆರೆಯವರೆಗೆ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು.
ಸಂಘ ಪರಿವಾರದ ಮುಖಂಡರಾದ ಆರ್.ಬಾಲಸುಬ್ರಹ್ಮಣ್ಯಂ, ಮುರುಗೇಶ್, ನಟರಾಜ್, ಭಾಸ್ಕರ್ ರಾಜೇ ಅರಸ್, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್, ಮಹೇಂದ್ರ, ಕುಮಾರ್ ಭಾಗವಹಿಸಿದ್ದರು.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ನಾಗಮಂಗಲ ಡಿ.ವೈ.ಎಸ್.ಪಿ. ಚೆಲುವರಾಜು ಅವರ ನೇತೃತ್ವದಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸರು ಬಿಗಿ ಪೋಲೀಸ್ ಬಂದೋಬಸ್ತ್ ಕೈಗೊಂಡಿದ್ದರು.




