Wednesday, September 18, 2024

ಪ್ರಾಯೋಗಿಕ ಆವೃತ್ತಿ

ಪುರಸಭೆ ವಾಣಿಜ್ಯ ಮಳಿಗೆ ವ್ಯಾಜ್ಯದ ಅಸಲಿಯತ್ತೇನು ಗೊತ್ತಾ…

ಪಾಂಡವಪುರ ಪುರಸಭೆ ಮುಂಭಾಗದ ಹಳೇ ಕಟ್ಟಡಗಳ ಅಂಗಡಿ ಮಳಿಗೆ ಮುಂದೆ ಶುಕ್ರವಾರ ಜನವೋ ಜನ… ಆಧಿಕಾರಿಗಳು ಮತ್ತು ಅಂಗಡಿ ಮಳಿಗೆಗಳ ಮಾಲೀಕರ ನಡುವೆ ವಾಕ್ಸಮರ, ತಳ್ಳಾಟ, ನೂಕಾಟ, ಕಿರುಚಾಟ ಎಲ್ಲವೂ ನಡೆದು ಹೋಯಿತು.

ಇದಕ್ಕೆಲ್ಲಾ ಕಾರಣ…

ಪುರಸಭೆ ಕಟ್ಟಡದಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ವಶಕ್ಕೆ ಪಡೆಯಲು ಉಪವಿಭಾಗಾಧಿಕಾರಿ ಶಿವಾನಂದ ಮೂರ್ತಿ ಮುಂದಾದಾಗ ವಾಣಿಜ್ಯ ಮಳಿಗೆ ಮಾಲೀಕರು ಅಧಿಕಾರಿಗಳ ಮನವಿಗೂ ಜಗ್ಗಲಿಲ್ಲ.

ಕೊನೆಗೆ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು, ಪೊಲೀಸ್ ಬಂದೋಬಸ್ತ್ ಮೂಲಕ ಅಂಗಡಿಗಳ ಬಾಗಿಲು ಮುಚ್ಚಿಸಿದರು.

ಈ ಸಂದರ್ಭದಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಉಪವಿಭಾಗಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳ ಜೊತೆ ಕೆಲ ಅಂಗಡಿ ಮಾಲೀಕರು ಉದ್ದಟತನದಿಂದ ವರ್ತಿಸಿದಾಗ, ವಿಧಿಯಿಲ್ಲದೆ ಪೊಲೀಸರು ಅಂಗಡಿ ಮಾಲೀಕರನ್ನು ಎಳೆದು ಅಂಗಡಿಗಳಿಗೆ ಬೀಗ ಜಡಿದರು.

ಆಗ ಅಂಗಡಿಗಳ ಮಾಲೀಕರು ಏಕೆ ಬಾಗಿಲು ಹಾಕಿಸುತ್ತೀರಿ,ಅದೆಂಗೆ ಬಾಗಿಲು ಹಾಕಿಸುತ್ತೀರಿ,ನೋಟೀಸ್ ಕೊಡದೆ ಅಂಗಡಿ ಬಾಗಿಲು ಹಾಕಿಸಿ ದಬ್ಬಾಳಿಕೆ ಮಾಡುತ್ತೀರಿ ಎಂದೆಲ್ಲಾ ಕಿರುಚಾಡಲಾರಂಭಿಸಿದರು.

ಒಂದು ಹಂತದಲ್ಲಿ ಅಂಗಡಿ ಮಾಲೀಕರು ಹಾಗೂ ಅಧಿಕಾರಿಗಳ ಮಧ್ಯೆ ಭಾರೀ ಜಟಾಪಟಿಯೇ ನಡೆದುಹೋಯಿತು.

ಕೊನೆಗೆ ಶಾಸಕ ಸಿ.ಎಸ್.ಪುಟ್ಟರಾಜು,ತಹಶೀಲ್ದಾರ್ ಎಸ್.ಎಲ್.ನಯನ,ಪುರಸಭೆ ಅಧ್ಯಕ್ಷೆ ಮಂಜುಳ ಅಂಗಡಿ ಮಾಲೀಕರ ಸಭೆ ನಡೆಸಿ ಮಾತನಾಡಿದ್ದಾರೆ.

ಮೂಲ ಅಂಗಡಿ ಮಾಲೀಕರು ಹಾಗೂ ಒಳ ಬಾಡಿಗೆ ಪಡೆದು ಅಂಗಡಿ ನಡೆಸುತ್ತಿರುವವರಿಗೂ ಮಳಿಗೆ ನೀಡುವ ಭರವಸೆ ನೀಡಲಾಗಿದೆ.

ಅಂಗಡಿ ಮಳಿಗೆಗಳ ಮಾಲೀಕರ ಮುಂದಿನ ನಡೆ ಏನು ಎಂಬುದು ಗೊತ್ತಾಗುತ್ತಿಲ್ಲ.ಅಧಿಕಾರಿಗಳು ಹೇಗೆ ಈ ಸಮಸ್ಯೆ ಬಗೆಹರಿಸುತ್ತಾರೋ ಕಾದು ನೋಡಬೇಕಿದೆ.

ಪುರಸಭೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಅಂಗಡಿ-ಮಳಿಗೆಗಳಿವೆ.ಐವತ್ತು ವರ್ಷಕ್ಕೂ ಹೆಚ್ಚು ಹಳೆಯದಾದ ಕಟ್ಟಡ ಸಾಕಷ್ಟು ಶಿಥಿಲವಾಗಿದ್ದು ಕೆಲವರು ಅಂಗಡಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ಕೊಂಡಿದ್ದಾರೆ.

ಮೂಲ ಬಾಡಿಗೆದಾರರಲ್ಲಿ ಒಂದಿಬ್ಬರನ್ನು ಹೊರತು ಪಡಿಸಿದರೆ ಉಳಿದ ಅಂಗಡಿ ಮಾಲೀಕರು ತಮ್ಮದೇ ಸ್ವಂತ ಅಂಗಡಿ ಎಂಬಂತೆ ಬೇರೆಯವರಿಗೆ ಲಕ್ಷಾಂತರ ರೂಗಳಿಗೆ ಮಾರಿದ್ದಾರೆ.

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಪುರಸಭೆಗೆ ಬಾಡಿಗೆ ಕಟ್ಟಬೇಕಾದ ಅಂಗಡಿಗಳ ಮಾಲೀಕರು ತಮ್ಮದೇ ಅಂಗಡಿಯಂತೆ ಬಿಂಬಿಸಿ ಪ್ರತಿತಿಂಗಳು ಸರ್ಕಾರಕ್ಕೆ ಬರಬೇಕಾದ ಲಕ್ಷ ಲಕ್ಷ ಹಣವನ್ನು ವಂಚಿಸಿ ತಾವು ಲಾಭ ಮಾಡಿಕೊಂಡಿದ್ದಾರೆ.

ಮೂಲ ಬಾಡಿಗೆದಾರರು ಪುರಸಭೆಗೆ ಕಟ್ಟುವ ಬಾಡಿಗೆ ಎಷ್ಟು ಅಂತಿರಾ? ಕೇವಲ ಮುನ್ನೂರು ರೂಪಾಯಿಗಳು. ಪ್ರತಿ ಅಂಗಡಿಗೆ ಹತ್ತಿಪ್ಪತ್ತು ಸಾವಿರ ಬಾಡಿಗೆ ಫಿಕ್ಸ್ ಮಾಡಿಕೊಂಡಿರುವ ಅಂಗಡಿ ಮಾಲೀಕರು ಪುರಸಭೆಗೆ ಕಟ್ಟುವ ಬಾಡಿಗೆ ಕೇವಲ ಮುನ್ನೂರು ರೂಪಾಯಿಗಳು ಎಂದರೆ, ಒಳಬಾಡಿಗೆಯ ಅಕ್ರಮ ಬ್ಯುಸಿನೆಸ್ ಎಂತಹುದು ಎಂಬುದು ಗೊತ್ತಾಗುತ್ತದೆ.

ಇದರ ಹಿಂದಿರುವ ರಾಜಕಾರಣ

ಅಂಗಡಿ ಮಾಲೀಕರು ಪುರಸಭೆಯ ಆಸ್ತಿಯನ್ನು ತಮ್ಮದೆಂಬಂತೆ ವರ್ತಿಸಲು ಹಿಂದಿರುವುದು ಪಕ್ಷಗಳ ರಾಜಕಾರಣ.ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರ ಮಕ್ಕಳು, ಸಂಬಂಧಿಕರಿಗೆ ಸೇರಿದ ಅಂಗಡಿಗಳನ್ನು ಅಷ್ಟು ಸುಲಭವಾಗಿ ಎತ್ತಂಗಡಿ ಮಾಡಿಸುವುದು ಸುಲಭದ ಕೆಲಸವಲ್ಲ.

ಅಕ್ರಮವಾಗಿ ನೆಲೆಸಿರುವವರನ್ನು ತೆರವುಗೊಳಿಸಿ, ಹೊಸ ಅಂಗಡಿ ಮಳಿಗೆ ನಿರ್ಮಿಸುವುದು ಅಷ್ಟು ಸುಲಭದಲ್ಲಿ. ಆದರೆ ಶಾಸಕ ಸಿ.ಎಸ್.ಪುಟ್ಟರಾಜು ನನ್ನ ಪಕ್ಷದವರು ಸೇರಿದಂತೆ ಯಾವ ಪಕ್ಷದವರೇ ಇರಲಿ ತೆರವುಗೊಳಿಸುವ ಸಂದರ್ಭದಲ್ಲಿ ಯಾವ ಒತ್ತಡಗಳಿಗೂ ಒಳಗಾಗಲ್ಲ. ನಾನೇ ಮುಂದೆ ನಿಂತು ಅಂಗಡಿಗಳನ್ನು ತೆರವುಗೊಳಿಸುತ್ತೇನೆ ಎಂದು ಪುರಸಭೆ ಸದಸ್ಯರ ಜೊತೆ ಸಭೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ಅಂಗಡಿ ಮಳಿಗೆ ಖಾಲಿ ಮಾಡಿಸುವ ವಿಚಾರವಾಗಿ ನಡೆಯುತ್ತಿದ್ದ ಸಭೆಗೆ ಬಂದ ಅಂಗಡಿ ಮಾಲೀಕರು ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಿದ ನಂತರ ತೆರವಿಗೆ ಮೂರು ದಿನಗಳ ಕಾಲಾವಕಾಶ ಕೊಟ್ಟು, ನಂತರ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

ಪುರಸಭೆ ಹಳೇ ವಾಣಿಜ್ಯ ಮಳಿಗೆಯನ್ನು ಧ್ವಂಸಗೊಳಿಸಿ ಹೊಸದಾಗಿ ಎರಡು ತಿಂಗಳಲ್ಲಿ ಅಂಗಡಿ ನಿರ್ಮಿಸಿ, ಮೂಲ ಬಾಡಿಗೆದಾರರಿಗೆ ನೀಡುವುದು ಹಾಗೂ ಮೊದಲನೇ ಅಂತಸ್ತಿನಲ್ಲಿ ಮಳಿಗೆ ನಿರ್ಮಿಸಿ, ಹರಾಜು ಪ್ರಕ್ರಿಯೆ ಮೂಲಕ ಅಂಗಡಿ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ.

ಒಟ್ಟಿನಲ್ಲಿ ಪುರಸಭೆ ಅಂಗಡಿ ಮಳಿಗೆಗಳ ಮಾಲೀಕರ ಐವತ್ತು ವರ್ಷಗಳ ಅಧಿಪತ್ಯ ಅಂತ್ಯಗೊಂಡು ಪುರಸಭೆಗೆ ಅಂಗಡಿ ಮಳಿಗೆಗಳು ದಕ್ಕಲಿ.ಆ‌ ಮೂಲಕ ಪುರಸಭೆ ಆದಾಯ ದುಪ್ಪಟ್ಟಾಗಿ ಆ ಹಣದಲ್ಲಿ ಅಭಿವೃದ್ಧಿ ಕೆಲಸಗಳು ಮುಂದುವರೆಯಲಿ ಎಂಬುದು ಪಟ್ಟಣದ ನಾಗರೀಕರ ಒತ್ತಾಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!