Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತರನ್ನು ಸಂಕ್ರಾಂತಿ ಮಾಡಲು ಕಳಿಸಿ ”ಧರಣಿಯನ್ನು ಮುಂದುವರಿಸಿದ ಮುಸ್ಲಿಂ ಬಾಂಧವರು” !

ಮಕರ ಸಂಕ್ರಾಂತಿ ಹಬ್ಬದ ದಿನ ಮಂಡ್ಯನಗರದಲ್ಲಿ ನಿಜವಾದ ಮಾನವೀಯತೆ, ಜಾತ್ಯತೀತತೆ ಎಂದರೆ ಏನು ಎಂಬುದನ್ನು ಮಂಡ್ಯದ ಮುಸಲ್ಮಾನ ಬಾಂಧವರು ತೋರಿಸಿ ಕೊಟ್ಟು ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದರು.

ಹೇಳಿ ಕೇಳಿ ಮಕರ ಸಂಕ್ರಾಂತಿಯು ಹೊಸ ವರ್ಷದ ಮೊದಲ ಹಬ್ಬ, ಅಲ್ಲದೇ ಈ ಹಬ್ಬವನ್ನು ರೈತರು ತನ್ನ ಕೃಷಿ ಚಟುವಟಿಕೆಗೆ ಹೆಗಲುಕೊಟ್ಟು ದುಡಿವ ದನಕರುಗಳೊಂದಿಗೆ ಆಚರಣೆ ಮಾಡುವುದು ಸರ್ವೇ ಸಾಮಾನ್ಯ. ಹಾಗಾಗಿ ಹಬ್ಬ ಆಚರಣೆಗೆ ರೈತರು ಮನೆಯಲ್ಲಿರಬೇಕಾಗುತ್ತದೆ ಅಲ್ಲವೇ ? ಇದನ್ನು ಅರ್ಥ ಮಾಡಿಕೊಂಡ ಮಂಡ್ಯನಗರದ ಮುಸ್ಲಿಂ ಬಾಂಧವರು ಮಂಡ್ಯನಗರದಲ್ಲಿ ಕಳೆದ 72 ದಿನಗಳಿಂದ ನಡೆಯುತ್ತಿರುವ ರೈತರ ಅನಿರ್ಧಿಷ್ಟ ಧರಣಿಯಲ್ಲಿ ಭಾನುವಾರ ಭಾಗವಹಿಸುವ ಮೂಲಕ ”ದಯಮಾಡಿ ನೀವು ಮನೆಗೆ ತೆರಳಿ ಹಬ್ಬ ಮಾಡಿ, ಇಲ್ಲಿ ನಾವಿರುತ್ತೇವೆ” ಎಂದು ರೈತ ಪರವಾಗಿ ಧರಣಿಯನ್ನು ಮುಂದವರೆಸಿ ಎಲ್ಲರ ಗಮನ ಸೆಳೆದರು.

ಧರ್ಮಗಳ ನಡುವೆ ಬೆಂಕಿ ಹಚ್ಚುವವರಿಗೆ ಪಾಠವಾದ ಹಿಂದೂ-ಮುಸ್ಲಿಂರ ಬಾಂಧವ್ಯ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲವು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಲಾಭಕ್ಕೋಸ್ಕರ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತವೆ. ಆದರೆ ರೈತನ ಹೋರಾಟಕ್ಕೆ ಹೆಗಲು ಕೊಟ್ಟ ಮುಸಲ್ಮಾನರ ಈ ನಿಲುವು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರೈತಸಂಘದ ಪ್ರಧಾನ ಕಾರ್ಯದರ್ಶಿ ಮಧುಚಂದನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೇ ಇಂತಹ ಉತ್ತಮ ಕೆಲಸವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಬರೆದು ಪೋಸ್ಟ್ ಮಾಡಿದ್ದಾರೆ.

ಮತ ಮತಗಳ ನಡುವೆ ಭಿನ್ನಾಭಿಪ್ರಾಯಗಳನ್ನು ತಂದಿಟ್ಟು, ತಮ್ಮ ಬೇಳೆ ಬೇಯಿಸಿಕೊಳ್ಳುವ, ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲ ರಾಜಕೀಯ ಪಕ್ಷಗಳ ನಡೆಗೆ ಮುಸಲ್ಮಾನರ ಧರ್ಮಾತೀತ, ಜಾತ್ಯತೀತ ಈ ಮಾನವೀಯ ನಡೆ ತಕ್ಕ ಉತ್ತರ ನೀಡಿದಂತಿದೆ ಎಂದು ರೈತ ಮುಖಂಡರು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.

ಮಕರ ಸಂಕ್ರಾಂತಿ ಸಂದರ್ಭದಲ್ಲಿ ಹಿಂದೂ-ಮುಸ್ಲಿಂರು ಒಗ್ಗೂಡಿ ಹೋರಾಟಕ್ಕೆ ಪರಸ್ಪರರು ಕೈ ಜೋಡಿಸಿದ್ದನ್ನು ಕಂಡ ಮಂಡ್ಯದ ನಾಗರೀಕರು ‘ನಿಜವಾದ ಮಾನವೀಯತೆ, ಭಾತೃತ್ವ ಅಂದ್ರೆ ಇದಲ್ಲವೇ ?’ ಎಂದು ಮಾತನಾಡಿಕೊಳ್ಳುವಂತೆ ಮಾಡಿತು.

72ನೇ ದಿನದ ಧರಣಿಯಲ್ಲಿ ಮುಸಲ್ಮಾನ ಬಾಂಧವರಾದ ಶಬೀರ್, ಎಂ.ಕೆ.ಬಾಬು, ನಯಮತ್ ಹಾಗೂ ವಾಸೀಂ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!