ವರದಿ: ಪ್ರಭು ವಿ ಎಸ್
ಭಗವದ್ಗೀತೆಯ ಅಂಶಗಳು ಇಂದಿಗೂ ಸರ್ವಕಾಲಿಕವಾದದ್ದು ವಿದ್ಯಾರ್ಥಿಗಳು ಸತ್ಯ ಧರ್ಮ ನಿಷ್ಠೆ ಪ್ರಾಮಾಣಿಕತೆಯತ್ತ ಮುಖ ಮಾಡಬೇಕೆಂದು ಪುರಸಭೆ ಸದಸ್ಯೆ ಬಿ.ಸಿ. ಸರ್ವಮಂಗಳ ತಿಳಿಸಿದರು.
ಮದ್ದೂರು ಪಟ್ಟಣದ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಧರ್ಮ ನಿಷ್ಠೆ ಪ್ರಾಮಾಣಿಕತೆಗೆ ಹೆಸರಾಗಿದ್ದ ಧರ್ಮ ಕಾಲದ ಯುಗದಲ್ಲಿ ನಾವುಗಳು ನ್ಯಾಯದ ಪರವಾಗಿ ಇದ್ದು ಶ್ರೀಕೃಷ್ಣನ ಸಂದೇಶಗಳಿರುವ ಭಗವದ್ಗೀತೆಯ ಬಗ್ಗೆ ಹೆಚ್ಚಿನ ಮಹತ್ವವನ್ನು ತಿಳಿದುಕೊಂಡು ಸನ್ಮಾರ್ಗದತ್ತ ಹೆಜ್ಜೆ ಹಾಕಬೇಕೆಂದರು.
ಆಯುರ್ವೇದ ವೈದ್ಯೆ ಡಾ.ಕವಿತಾ ಮಾತನಾಡಿ, ಶ್ರೀವಿಷ್ಣುವಿನ ಎಂಟನೇ ಅವತಾರದಲ್ಲಿ ಶ್ರೀಕೃಷ್ಣನಾಗಿ ಜನಿಸಿದ್ದು ವಸುದೇವ ಮತ್ತು ದೇವಕಿಯ ಎಂಟನೇ ಮಗನಾಗಿ ಜನಿಸುತ್ತಾನೆ, ಇದನ್ನು ಮನಗಂಡು ವಿದ್ಯಾರ್ಥಿಗಳು ಅಧರ್ಮದಿಂದ ಧರ್ಮದತ್ತ ಸಾಗುವ ಮೂಲಕ ತಮ್ಮ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳು ಕೃಷ್ಣ- ರಾಧೆ ವೇಷಭೂಷಣ ತೊಟ್ಟು ನೋಡುಗರ ಗಮನ ಸೆಳೆದರಲ್ಲದೆ ತರಗತಿವಾರು ಮಕ್ಕಳನ್ನು ಆಯ್ಕೆ ಮಾಡಿ ಬಹುಮಾನವನ್ನು ವಿತರಿಸಲಾಯಿತು.
ಈ ವೇಳೆ ವೈದ್ಯೆರಾದ ಉಮಾ, ಮುಖ್ಯ ಶಿಕ್ಷಕಿ ಪಾವನ, ಕಲ್ಪಿತಾ ಸಂತೋಷ್ ಗೌಡ, ಹಾಗೂ ಶಿಕ್ಷಕರು ಸಿಬ್ಬಂದಿಗಳು ಹಾಜರಿದ್ದರು.




