ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಜುಲೈ 15 ರಿಂದ 25 ರೊಳಗೆ ಪುನರಾರಂಭ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಇಂದು ಮೈ ಷುಗರ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಅವರು, ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮಾತನಾಡಿದರು.
ಸರ್ಕಾರದಿಂದ ಅನುಮತಿ ಪಡೆದು ಮೇ 2 ರಿಂದ ಪುನಶ್ಚೇತನ ಕೆಲಸಗಳನ್ನು ಪ್ರಾರಂಭ ಮಾಡಲು ಎರಡು ಸಂಸ್ಥೆಯವರಿಗೆ ಕಾರ್ಯಾದೇಶ ನೀಡಲಾಗುವುದು.
ಸಂಸ್ಥೆಯವರಿಗೆ ಕೆಲಸಗಳನ್ನು ಪೂರ್ಣಗೊಳಿಸಲು 60 ರಿಂದ 70ದಿನಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದರು. ಪುನಶ್ಚೇತನ ಕೆಲಸಕ್ಕಾಗಿ 200 ರಿಂದ 250 ಕೆಲಸಗಾರರು ಆಗಮಿಸಲಿದ್ದು, ಅವರ ವಾಸ್ತವ್ಯಕ್ಕೆ ಬೇಕಿರುವ ಕ್ವಾಟ್ರಸ್ ದುರಸ್ತಿ ಕೆಲಸಗಳನ್ನು ಪ್ರಾರಂಭಿಸುವಂತೆ ತಿಳಿಸಲಾಗಿದೆ.
ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಸಮಯ ವ್ಯರ್ಥವಾಗದಂತೆ ಕೆಲಸವು 24×7 ನಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಕಾರ್ಖಾನೆಯ ಪುನಶ್ಚೇತನಕ್ಕಾಗಿ ತಾಂತ್ರಿಕ ಹಾಗೂ ಆರ್ಥಿಕ ಸಮಿತಿಯನ್ನು ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮೈ ಷುಗರ್ ಕಂಪನಿ ಬಂದ್ ಆಗದಂತೆ ನೋಡಿಕೊಳ್ಳಬೇಕು.
ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಆಡಳಿತ, ಹಣಕಾಸು ಹಾಗೂ ತಾಂತ್ರಿಕ ವರದಿಯನ್ನು ಪಡೆದು ಕಾರ್ಖಾನೆಯನ್ನು ಪುನರಾರಂಭಗೊಳಿಸಲಾಗುತ್ತಿದೆ ಎಂದರು.
ರೈತರಿಂದ ಕಬ್ಬು ಖರೀದಿಸುವ ಕೆಲಸವು ಸಹ ಇದರ ಜೊತೆಯಲ್ಲೇ ನಡೆಯಬೇಕಿದ್ದು, ಹೋಬಳಿ ಮಟ್ಟದಲ್ಲಿ ಕಚೇರಿಗಳನ್ನು ತೆರೆದು, ರೈತರಿಗೆ ಮನವರಿಕೆ ಮಾಡಿ ಹೆಚ್ಚಿನ ಪ್ರಚಾರ ನೀಡಿ ರೈತರಿಂದ 6 ರಿಂದ 7 ತಿಂಗಳಿಗೆ ಬೇಕಿರುವ ಕಬ್ಬು ಖರೀದಿಗೆ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ: ನಾರಾಯಣಗೌಡ ಅವರು ಮಾತನಾಡಿ, ಸಕ್ಕರೆ ಕಾರ್ಖಾನೆಯಲ್ಲಿ ಶೀಘ್ರ ದುರಸ್ತಿ ಕೆಲಸಗಳು ಪ್ರಾರಂಭವಾಗಲಿದ್ದು, ಕಾರ್ಖಾನೆಯಲ್ಲಿ ವಸ್ತುಗಳ ಸಾಗಾಣಿಕೆ ಕೆಲಸಗಳು ನಡೆಯುತ್ತಿರುತ್ತದೆ.
ಪೊಲೀಸ್ ಇಲಾಖೆ ವತಿಯಿಂದ ಕಾರ್ಖಾನೆಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು. ಕೆಲಸ ನಡೆಯುವ ಸ್ಥಳ ಹಾಗೂ ಕಾರ್ಖಾನೆಯ ಗೇಟ್‌ಗಳ ಬಳಿ ಸಿ.ಸಿ.ಟಿವಿ ಅಳವಡಿಸುವಂತೆ ತಿಳಿಸಿದರು.
ಕಾರ್ಖಾನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇದ್ದಲ್ಲಿ ಗಮನಕ್ಕೆ ತಂದರೆ ಅಂತ್ಯದೊಳಗೆ ಬಗೆಹರಿಸಿ ಕೊಡುವುದಾಗಿ ತಿಳಿಸಿದರು.
ಮೈಷುಗರ್ ಕಾರ್ಖನೆಯ ವ್ಯವಸ್ಥಾಪಕ ನಿರ್ದೇಶಕ ಪಾಟೀಲ್ ಅಪ್ಪಾ ಸಾಹೇಬ್ ಅವರು, ಕಾರ್ಖಾನೆಯ ಪುನಶ್ಚೇತನ ಕೆಲಸಗಳ ಬಗ್ಗೆ ಸಚಿವರಿಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯಪ್ರಭು ಎಸ್ಪಿ ಯತೀಶ್ , ಉಪ ವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದ ಮೂರ್ತಿ, ಮೈಷುಗರ್ ಅಧ್ಯಕ್ಷ ಶಿವಲಿಂಗೆಗೌಡ, ಬಿಜೆಪಿ ಮುಖಂಡರಾದ ಇಂದ್ರೇಶ್, ಡಾ. ಸಿದ್ಧರಾಮಯ್ಯ, ಹಾಗೂ ಮತ್ತಿತರರು ಇದ್ದರು.