ನನ್ನ ಜನೋಪಯೋಗಿ ಕಾರ್ಯಗಳನ್ನು ಸಹಿಸದ ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದು,ಇದಕ್ಕೆ ಬೆಲೆ ಕೊಡಬಾರದೆಂದು ಸಮಾಜ ಸೇವಕ ಕದಲೂರು ಉದಯ್ ಜನರಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ತಮ್ಮ ಮನೆಯಲ್ಲಿ ಬೆನ್ನುಮೂಳೆ ನೋವಿಗೆ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವ ಉದಯ್ ಅವರು ಅಪಪ್ರಚಾರದ ಹಿನ್ನಲೆಯಲ್ಲಿ ಮನೆಯಿಂದಲೇ ಮದ್ದೂರು ಕ್ಷೇತ್ರ ಜನರಿಗೆ ವಿಡಿಯೋ ಮಾಡಿ ಮನವಿ ಮಾಡಿದ್ದಾರೆ.
ಮದ್ದೂರು ಕ್ಷೇತ್ರದ ಎಲ್ಲಾ ನನ್ನ ಪ್ರೀತಿಯ ಬಂಧುಗಳೇ, ಸ್ನೇಹಿತರೇ ಹಾಗೂ ಅಭಿಮಾನಿಗಳೇ, ನಾನು ಕಳೆದ ಎರಡು ವಾರಗಳಿಂದ ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದು, ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ.
ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು,ಕೆಲವೇ ದಿನಗಳಲ್ಲಿ ನಿಮ್ಮನ್ನೆಲ್ಲಾ ಭೇಟಿ ಮಾಡಿ ಎಂದಿನಂತೆ ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ.
ನನ್ನ ಜನಪ್ರಿಯತೆ ಸಹಿಸಿಕೊಳ್ಳದ ಕೆಲ ಕಿಡಿಗೇಡಿಗಳು ನಕಲಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಬೆಲೆ ಕೊಡಬೇಡಿ. ತಮಗೆ ಸೇವೆ ಮಾಡಿ ಹೆಸರು ಮಾಡಲು ಆಗುವುದಿಲ್ಲ ಎಂದು ನನ್ನ ಹೆಸರಿಗೆ ಮಸಿ ಬಳಿದು ಕೆಟ್ಟ ಹೆಸರು ತರಲು ಹೊರಟಿದ್ಧಾರೆ.ಅವರಿಗೆ ಭಗವಂತ ಒಳ್ಳೆಯದು ಮಾಡಲಿ.
ಕ್ಷೇತ್ರದ ಜನರು ಯಾವುದೇ ಊಹಾ ಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.ನಾನು ಇಲ್ಲದಿದ್ದರೂ ಕ್ಷೇತ್ರ ವ್ಯಾಪ್ತಿ ನನ್ನ ತಮ್ಮ ಕೆ.ಎಂ.ರವಿ, ಸಿಪಾಯಿ ಶ್ರೀನಿವಾಸ್,ಕದಲೂರು ತಿಮ್ಮೇಗೌಡ ನಿರಂತರವಾಗಿ ನಿಮ್ಮ ಜೊತೆಯಲ್ಲೇ ಇರುತ್ತಾರೆ ಎಂದು ತಿಳಿಸಿದ್ದಾರೆ.
ತಮ್ಮ ಜೊತೆಯಲ್ಲಿ ಉದಯ್ ಚಾರಿಟಬಲ್ ಟ್ರಸ್ಟ್ ತಮ್ಮ ನಿರಂತರ ಸೇವೆಯಲ್ಲಿ ಇರುತ್ತದೆ ಎಂದಿರುವ ಉದಯ್ ಅವರು ಮದ್ದೂರು ತಾಲ್ಲೂಕನ್ನು ಮಾದರಿಯಾಗಿ ಮಾಡಲು ಎಲ್ಲರೂ ಸೇರಿ ಕಾರ್ಯೋನ್ಮುಖರಾಗೋಣ ಎಂದಿದ್ದಾರೆ.