Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಸಿದ್ದ ‘ಮೈಸೂರು ದಸರಾ’ಗೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ಡಾ. ಹಂಸಲೇಖ ಅವರು ಚಾಮುಂಡಿ ಬೆಟ್ಟದಲ್ಲಿ ಉದ್ಘಾಟಿಸಿದರು.

ಅ.15ರ ಭಾನುವಾರ ಬೆಳಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜೆಯ ಬಳಿಕ ನಡೆದ ಸರಳ ಸಮಾರಂಭದಲ್ಲಿ ಹತ್ತು ದಿನಗಳ ಉತ್ಸವಕ್ಕೆ ಚಾಲನೆ ದೊರೆಯಿತು. ಅ.24ರವರೆಗೆ ದಸರಾ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು.

ಪಲ್ಲಕ್ಕಿಯಲ್ಲಿ ಅಲಂಕೃತ ಗೊಂಡಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಚಿವರಾದ ಡಾ ಎಚ್ ಸಿ ಮಹದೇವಪ್ಪ, ಕೆ ಎಚ್. ಮುನಿಯಪ್ಪ, ಶಿವರಾಜ್ ತಂಗಡಗಿ, ಬಿ.ವೆಂಕಟೇಶ್, ಕೆ ಜೆ ಜಾರ್ಜ್, ಸಂಸದ ಪ್ರತಾಪ್ ಸಿಂಹ, ಶಾಸಕ ತನ್ವೀರ್ ಸೇಠ್, ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅವರು ಎಲ್ಲ ಗಣ್ಯರನ್ನು ಸ್ವಾಗತಿಸಿದರು.

ಮೈಸೂರು ಜಿಲ್ಲೆಯ ಎಲ್ಲ 9 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅದರ ಮಧ್ಯೆಯೂ, ಉತ್ಸವವನ್ನು ಸಾಂಪ್ರದಾಯಿಕವಾಗಿ ಆಯೋಜಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಮೊದಲ ದಿನವಾದ ಭಾನುವಾರ ಬರೋಬ್ಬರಿ 11 ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಚಲನಚಿತ್ರೋತ್ಸವ, ಸ್ಕೌಟ್ಸ್‌ ಮೈದಾನದಲ್ಲಿ ಆಹಾರ ಮೇಳ, ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ, ವಸ್ತುಪ್ರದರ್ಶನ, ಸೆನೆಟ್ ಭವನದಲ್ಲಿ ಯೋಗ ದಸರಾ, ಕಲಾಮಂದಿರದಲ್ಲಿ ಅಖಿಲ ಭಾರತ ಹಾಗೂ ರಾಜ್ಯ ಮಟ್ಟದ ಶಿಲ್ಪಕಲಾ ಪ್ರದರ್ಶನ, ಓವೆಲ್‌ ಮೈದಾನದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳ, ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ ಗರಿಗೆದರಲಿದೆ. ನ್ಯೂ ಸಯ್ಯಾಜಿರಾವ್‌ ರಸ್ತೆಯ ಹಸಿರು ಮಂಟಪದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕ್ರೀಡಾಕೂಟ ಈಗಾಗಲೇ ಆರಂಭಗೊಂಡಿದೆ.

ಅಂಬಾವಿಲಾಸ ಅರಮನೆ ಆವರಣ ಸೇರಿದಂತೆ 10 ವಿವಿಧ ವೇದಿಕೆಗಳಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಸೌರಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ 7ಕ್ಕೆ ಉದ್ಘಾಟಿಸಲಿದ್ದಾರೆ. ಕಲಾವಿದೆ ಪದ್ಮಾಮೂರ್ತಿ ಅವರಿಗೆ 2023-24ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಲಿದೆ. ಈ ಬಾರಿ ಏರ್‌ಶೋ ನಡೆಯಲಿದ್ದು, ಅ.22ರಂದು ರಿಹರ್ಸಲ್ ಹಾಗೂ 23ರಂದು ಮುಖ್ಯ ಪ್ರದರ್ಶನ ಇರಲಿದೆ.

ಉತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಅ.24ರಂದು ನಡೆಯಲಿದ್ದು, ಅಂದು ಮಧ್ಯಾಹ್ನ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ ಅರಮನೆ ಒಳಾವರಣದಲ್ಲಿ ಮೆರವಣಿಗೆ ಚಾಲನೆ ದೊರೆಯಲಿದೆ.

ಗಜಪಡೆಯ ನಾಯಕ ಅಭಿಮನ್ಯು ಆನೆ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿಡಲಾಗುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಜಂಬೂಸವಾರಿ ಉದ್ಘಾಟಿಸಲಿದ್ದಾರೆ. ಮೆರವಣಿಗೆಯು ಬನ್ನಿಮಂಟಪದ ತಲುಪಿದ ಬಳಿಕ, ಅಲ್ಲಿನ ಮೈದಾನದಲ್ಲಿ ಸಂಜೆ 7.30ಕ್ಕೆ ಪಂಜಿನ ಕವಾಯತು ಪ್ರದರ್ಶನ ನಡೆಯಲಿದೆ.

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ, ಗೌರವವಂದನೆ ಸ್ವೀಕರಿಸಲಿದ್ದಾರೆ. ಈ ಪ್ರದರ್ಶನ ದೊಂದಿಗೆ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಸಿಎಂ ಸಿದ್ದರಾಮಯ್ಯನವರಿಗೆ 6ನೇ ದಸರಾ

ಮೈಸೂರು ಜಿಲ್ಲೆಯವರೇ ಆಗಿರುವ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಇದು 6ನೇ ದಸರಾವಾಗಿದೆ. ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದು 3ನೇ ದಸರಾ.

ಅರಮನೆಯಲ್ಲೂ ಸಿದ್ಧತೆ

ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ಭಾನುವಾರದಿಂದಲೇ ಶರನ್ನವರಾತ್ರಿ ಆಚರಿಸಲಿದ್ದಾರೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ರತ್ನಖಚಿತ ಸಿಂಹಾಸನದಲ್ಲಿ ಕುಳಿತು 9ನೇ ವರ್ಷದ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!