Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿ ಕ್ವಿಂಟಾಲ್‌ಗೆ 500 ರೂ ಪ್ರೋತ್ಸಾಹ ಧನ ನೀಡಲು ಒತ್ತಾಯ 

ಕೇಂದ್ರ ಸರ್ಕಾರ ಭತ್ತಕ್ಕೆ ನಿಗದಿಮಾಡಿರುವ ಎಂಎಫ್‌ಸಿ ಜೊತೆಗೆ ರಾಜ್ಯ ಸರ್ಕಾರ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಮಾತ್ರ ಪ್ರತಿ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಇದನ್ನು ರಾಜ್ಯದ ಎಲ್ಲ ಭತ್ತ ಬೆಳೆಗಾರರಿಗೂ ವಿಸ್ತರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, “ಭತ್ತದ ಬೆಳೆಗೆ ಖರ್ಚು ಮಾಡಿರುವ ಹಣ ಕೂಡ ವಾಪಸ್ಸು ಬರುತ್ತಿಲ್ಲ. ರಾಜ್ಯದ ಭತ್ತ ಬೆಳೆಯುವ ಪ್ರದೇಶದಲ್ಲಿ ಪ್ರತಿ ವರ್ಷ ಭತ್ತ ಬೆಳೆಯುವ ವಿಸ್ತೀರ್ಣ ಇಳಿಮುಖವಾಗುತ್ತಿದ್ದು, ಅಂದಾಜು ಶೇ.30ರಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ಕಂಡುಹಿಡಿದು ಭತ್ತದ ಬೆಳೆಗಾರರ ರಕ್ಷಣೆಗೆ ಮಾಡಬೇಕೆಂದು ಸರ್ಕಾರಕ್ಕೆ ಹಲವಾರು ಬಾರಿ ಪತ್ರ ಬರೆದು ಒತ್ತಾಯಿಸಲಾಗಿದೆ. ಆದರೆ, ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರ ಕೇವಲ ಮೂರು ಜಿಲ್ಲೆಗೆ ಮಾತ್ರ ಪ್ರೋತ್ಸಾಹ ಧನ ನೀಡಿ ತಾರತಮ್ಯ ಮಾಡಿದೆ” ಎಂದು ಆರೋಪಿಸಿದರು.

“ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷಕ್ಕಿಂತ ಹೆಚ್ಚು ಜನರಿಗೆ ಪಡಿತರವನ್ನು ವಿತರಿಸುತ್ತಿದ್ದು, ಹೊರರಾಜ್ಯದಿಂದ ತರಿಸುತ್ತಿರುವ ಅಕ್ಕಿಗೆ ಕಡಿವಾಣ ಹಾಕಬೇಕು. ಪಡಿತರ ವ್ಯವಸ್ಥೆಗೆ ರಾಜ್ಯದ ಭತ್ತವನ್ನು ಖರೀದಿಸಲು ಲಿಂಕ್‌ ಮಾಡಿದರೆ ಸಂಪೂರ್ಣ ಭತ್ತವನ್ನು ಎಂಎಫ್‌ಸಿ ಮತ್ತು ಪ್ರೋತ್ಸಾಹ ಧನದಲ್ಲಿ ಭತ್ತವನ್ನು ಕೊಂಡು ರೈತರಿಗೆ ಉತ್ತೇಜನ ನೀಡಬಹುದು. ಆದರೆ, ಸರ್ಕಾರ ಇದಕ್ಕೆ ಮುಂದಾಗದೇ ಇರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರ ತಾರತಮ್ಯ ನೀತಿಯನ್ನು ಕೈ ಬಿಟ್ಟು ಪ್ರೋತ್ಸಾಹ ಧನವನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು. ಇಲ್ಲವಾದಲ್ಲಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್‌ ಮತ್ತಿತರರು ಉಪಸ್ಥಿತರಿದ್ದರು. 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!