Monday, November 23, 2026

ಪ್ರಾಯೋಗಿಕ ಆವೃತ್ತಿ

ನಾಡಹಬ್ಬ ದಸರಾಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ

ವಿಶ್ವವಿಖ್ಯಾತ, ಐತಿಹಾಸಿಕ, ನಾಡಹಬ್ಬ ಮೈಸೂರು ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಚಾಲನೆ ನೀಡಲಿದ್ದಾರೆ.

ಇಂದು ಬೆಳಿಗ್ಗೆ 9.45 ರಿಂದ 10.05 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಚಾಲನೆ ನೀಡಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್. ಟಿ. ಸೋಮಶೇಖರ್, ಸುನಿಲ್ ಕುಮಾರ್, ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ, ಆನಂದ್ ಸಿಂಗ್, ಮೈಸೂರು ಮೇಯರ್ ಶಿವಕುಮಾರ್ ಸೇರಿದಂತೆ ಕೇಂದ್ರ ಸಚಿವರು ಹಾಗೂ ಶಾಸಕರು ಸಾಥ್ ನೀಡಲಿದ್ದಾರೆ.

ಅದ್ದೂರಿ ದಸರಾ
ಕಳೆದ ಎರಡು ವರ್ಷದಿಂದ ಕೊರೊನಾ ಮಹಾಮಾರಿಯಿಂದ ಮಂಕಾಗಿದ್ದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯಲಿದೆ. ಇಂದಿನಿಂದ 9 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ನವರಾತ್ರಿ ವೈಭವ ಆರಂಭವಾಗಲಿದೆ.

ಇತ್ತ ಅಂಬಾವಿಲಾಸ ಅರಮನೆಯಲ್ಲಿ ಇಂದಿನಿಂದ ಖಾಸಗಿ ದರ್ಬಾರ್ ನಡೆಯಲಿದ್ದು,ಗತಕಾಲದ ವೈಭವ ಮರುಕಳಿಸಲಿದೆ.ಒಂಭತ್ತು ದಿನಗಳ ಕಾಲ ಅದ್ದೂರಿ ದಸರಾಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಜನರ ಮನಸೂರೆಗೊಳ್ಳಲಿದೆ.

ದಸರಾ ತಯಾರಿಯನ್ನು ಸಿಎಂ ಬೊಮ್ಮಾಯಿ ವೀಕ್ಷಿಸಿದ್ದು, ರಾತ್ರಿ ನಗರ ಪ್ರದಕ್ಷಿಣೆ ಮಾಡುವ ಮೂಲಕ ವಿದ್ಯುತ್ ದೀಪಾಲಂಕಾರವನ್ನು ನೋಡಿ ಆನಂದಿಸಲಿದ್ದಾರೆ.

ಇಂದಿನ ಕಾರ್ಯಕ್ರಮಗಳು
ಮಧ್ಯಾಹ್ನ 12 ಕ್ಕೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ವಿಜ್ಞಾನ ಭವನದಲ್ಲಿ ಕೈಗಾರಿಕಾ ದಸರಾ ಉದ್ಘಾಟನೆ ಮಾಡಲಿದ್ದಾರೆ.

ಮಧ್ಯಾಹ್ನ 12:30ಕ್ಕೆ ಖ್ಯಾತ ಚಲನಚಿತ್ರ ನಟ ಶಿವರಾಜ್‍ಕುಮಾರ್ ಅವರು ಕಲಾಮಂದಿರದಲ್ಲಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 12.30 ಕ್ಕೆ ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕಾ ಸಚಿವ ಮುನಿರತ್ನ ಚಾಲನೆ ನೀಡಿದರೆ,ಮಧ್ಯಾಹ್ನ 1ಕ್ಕೆ ಸಚಿವ ಎಸ್‍.ಟಿ.ಸೋಮಶೇಖರ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ ಉದ್ಘಾಟನೆ ಮಾಡಲಿದ್ದಾರೆ.

ಮಧ್ಯಾಹ್ನ 3:30ಕ್ಕೆ ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ದೇವರಾಜ ಅರಸು ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದು, ಸಂಜೆ 4 ಕ್ಕೆ ವಸ್ತು ಪ್ರದರ್ಶನಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಚಾಲನೆ ನೀಡಲಿದ್ದಾರೆ.ಸಂಜೆ 5 ಕ್ಕೆ ಓವೆಲ್ ಮೈದಾನದಲ್ಲಿಯೋಗ ದಸರಾ, ನೃತ್ಯರೂಪಕ ನಡೆಯಲಿದೆ.

ಸಂಜೆ 5:30 ಕ್ಕೆ ಅರಮನೆಯಲ್ಲಿ ಸಚಿವ ಎಸ್‍ಟಿ. ಸೋಮಶೇಖರ್ ಅವರಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ನಡೆಯಲಿದೆ.ಸಂಜೆ 5:30ಕ್ಕೆ ರಾಜ್ಯಮಟ್ಟದ ಶಿಲ್ಪ ಚಿತ್ರಕಲೆ ಪ್ರದರ್ಶನಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ ಕಲಾಮಂದಿರ ಚಾಲನೆ ನೀಡಲಿದ್ದಾರೆ.

ಸಂಜೆ 6 ಕ್ಕೆ ಅರಮನೆ ವೇದಿಕೆ ಕಾರ್ಯಕ್ರಮ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಸಂಜೆ 6:30 ಕ್ಕೆ ವಿದ್ಯುತ್ ದೀಪಾಲಂಕಾರವನ್ನು ಸೈಯಾಜಿರಾವ್ ರಸ್ತೆಯಲ್ಲಿ ಸಚಿವ ಸುನೀಲ್ ಕುಮಾರ್ ಚಾಲನೆ ನೀಡಲಿದ್ದಾರೆ.

ಒಟ್ಟಾರೆ ಒಂಭತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವವಾದ ಮೈಸೂರು ದಸರಾಗೆ ಈಗಾಗಲೇ ದೇಶ-ವಿದೇಶಗಳಿಂದ ಜನರು ಆಗಮಿಸಿದ್ದು,ಮೈಸೂರು ಅದ್ದೂರಿಯಾಗಿ ಸಿಂಗಾರಗೊಂಡಿದೆ.ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಮಂಕಾಗಿದ್ದ ದಸರಾ ಈ ಬಾರಿ ಹಿಂದಿನ ವೈಭವಕ್ಕೆ ಮರಳಿದ್ದು,ಜನರ ಉತ್ಸಾಹ ಇಮ್ಮಡಿಯಾಗಿದೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ